ಹಾಸಿಗೆ ಬ್ಲಾಕಿಂಗ್ ಪ್ರಕರಣ: ಬಿಜೆಪಿ ಶಾಸಕ ಎಂ.ಸತೀಶ್‌ ರೆಡ್ಡಿ ಹಸ್ತಕ್ಷೇಪ

ಬೆಂಗಳೂರು: ‘ಸರ್ಕಾರಿ ಕೋಟಾದ ಹಾಸಿಗೆ ಹಂಚಿಕೆ ಮಾಡುವ ಬಿಬಿಎಂಪಿಯ ಕೋವಿಡ್‌ ವಾರ್‌ ರೂಂ ಸಿಬ್ಬಂದಿ ಹಾಸಿಗೆ ಮಾರಾಟ ದಂಧೆ ನಡೆಸುತ್ತಿದ್ದಾರೆ’ ಎಂದು ಧ್ವನಿ ಎತ್ತಿದ್ದ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಸತೀಶ್‌ ರೆಡ್ಡಿ ಅವರೇ ಈಗ ಹಾಸಿಗೆ ಹಂಚಿಕೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದ ಆರೋಪ ಎದುರಿಸುತ್ತಿದ್ದಾರೆ.

ಸತೀಶ್‌ ರೆಡ್ಡಿ ತಮ್ಮ ಬೆಂಬಲಿಗ ಬಾಬು ಎಂಬವರನ್ನು ಎಚ್‌ಎಸ್‌ಆರ್‌ ಬಡಾವಣೆಯಲ್ಲಿರುವ ಬೊಮ್ಮನಹಳ್ಳಿ ವಲಯ
ದ ವಾರ್‌ ರೂಂಗೆ ಕಳುಹಿಸಿ ಅವರ ಮೂಲಕ ಹಾಸಿಗೆ ಹಂಚಿಕೆ ಪ್ರಕ್ರಿಯೆ ಮೇಲೆ ಪ್ರಭಾವ ಬೀರುತ್ತಿದ್ದರು. ತಮಗೆ ಬೇಕಾದವರಿಗೆ ತಕ್ಷಣವೇ ಹಾಸಿಗೆ ಒದಗಿಸುವಂತೆ ಒತ್ತಾಯಿಸುತ್ತಿದ್ದರು. ಸೋಂಕಿನ ಲಕ್ಷಣವಿಲ್ಲದವರಿಗೆ, ಐಸಿಯುವಿನಲ್ಲಿ ಚಿಕಿತ್ಸೆ ಅಗತ್ಯವಿಲ್ಲದವರಿಗೂ ಹಾಸಿಗೆಕಾಯ್ದಿರಿಸಲು ಒತ್ತಡ ಹೇರುತ್ತಿದ್ದರು. ಇದರಿಂದ ಅಗತ್ಯವಿದ್ದವರಿಗೆ ಸಕಾಲದಲ್ಲಿ ಹಾಸಿಗೆ ಲಭಿಸುತ್ತಿರಲಿಲ್ಲ ಎನ್ನಲಾಗಿದೆ.

ವೈದ್ಯರು, ಸಹಾಯವಾಣಿ ಸಿಬ್ಬಂದಿ, ದೂರವಾಣಿ ಮೂಲಕ ಆರೋಗ್ಯ ಸಲಹೆ ನೀಡುವ ಸಿಬ್ಬಂದಿ, ದತ್ತಾಂಶ ದಾಖಲಿಸುವ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಮಾತ್ರ ವಾರ್‌ ರೂಂಗೆ ಪ್ರವೇಶವಿದೆ. ನೋಡಲ್‌ ಅಧಿಕಾರಿ ರಾಜೇಂದ್ರ ಕುಮಾರ್‌ ಕಟಾರಿಯಾ ನೇತೃತ್ವದ ಹಿರಿಯ ಅಧಿಕಾರಿಗಳ ತಂಡವು ಕಳೆದ ವಾರ ಈ ವಾರ್‌ ರೂಂಗೆ ದಿಢೀರ್‌ ಭೇಟಿ ನೀಡಿತ್ತು. ಸಿಬ್ಬಂದಿಯಲ್ಲದ ಬಾಬು ಅಲ್ಲಿದ್ದ ಬಗ್ಗೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೇ ಅವರನ್ನು ಹೊರಗೆ ಕಳುಹಿಸಿದ್ದರು. ಅವರನ್ನು ಒಳಗೆ ಬಿಟ್ಟುಕೊಳ್ಳಬಾರದು ಎಂದು ತಾಕೀತು ಮಾಡಿದ್ದರು. ಕೆಲದಿನಗಳ ಬಳಿಕ, ‘ಕೋವಿಡ್‌ ರೋಗಿಗಳಿಗೆ ಹಾಸಿಗೆ ಸಿಗುತ್ತಿಲ್ಲ’ ಎಂದು ಆರೋಪಿಸಿ ಶಾಸಕರ ನೇತೃತ್ವದಲ್ಲಿ ಬೆಂಬಲಿಗರು ವಾರ್‌ ರೂಂ ಬಳಿ ಪ್ರತಿಭಟನೆ ನಡೆಸಿದ್ದರು. ಆರೋಗ್ಯ ವೈದ್ಯಾಧಿಕಾರಿಯನ್ನು ಎಳೆದಾಡಿ ಹಲ್ಲೆಗೂ ಮುಂದಾಗಿದ್ದರು. ಅಧಿಕಾರಿಗೆ ಪೊಲೀಸರು ರಕ್ಷಣೆ ಒದಗಿಸಿದ್ದರು.

ಬಿಬಿಎಂಪಿ ದಕ್ಷಿಣ ವಲಯದ ವಾರ್‌ ರೂಂಗೆ ಮಂಗಳವಾರ ಭೇಟಿ ನೀಡಿದ್ದ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಸತೀಶ್‌ ರೆಡ್ಡಿ, ಎಲ್.ಎ.ರವಿ ಸುಬ್ರಹ್ಮಣ್ಯ, ಉದಯ್‌ ಗರುಡಾಚಾರ್ ಅವರ ತಂಡವು ಹಾಸಿಗೆ ಮಾರಾಟ ದಂಧೆ ಬಗ್ಗೆ ಆರೋಪ ಮಾಡಿತ್ತು. ‘ಶಾಸಕ, ಸಂಸದ ಹೇಳಿದರೆಂದು ಹಾಸಿಗೆ ಹಂಚಿಕೆ ಮಾಡಬಾರದು. ಸಹಾಯವಾಣಿಗೆ (1912) ಕರೆ ಮಾಡಿದವರಿಗೆ ಮಾತ್ರ ಹಾಸಿಗೆ ಸಿಗಬೇಕು’ ಎಂದು ತೇಜಸ್ವಿ ಸೂರ್ಯ ಹೇಳಿದ್ದರು.

ಇನ್ನೊಂದೆಡೆ, ಸಂಸದರ ಪಕ್ಕದಲ್ಲೇ ಇದ್ದ ಶಾಸಕ ಸತೀಶ್ ರೆಡ್ಡಿ, ‘ಶಾಸಕನಾಗಿ ನಾನು ಶಿಫಾರಸು ಮಾಡಿದವರಿಗೂ ಹಾಸಿಗೆ ಸಿಗುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು.

ಬಂಧುಗಳಿಗಾಗಿ ಹಾಸಿಗೆ ಬ್ಲಾಕ್‌ ಮಾಡಿದ್ದೇನೆಯೇ?: ಸತೀಶ್ ರೆಡ್ಡಿ

‘ನಾನೇನು ನನ್ನ ಬಂಧುಗಳಿಗಾಗಿ ಹಾಸಿಗೆ ಬ್ಲಾಕ್‌ ಮಾಡಿಸಿದ್ದೇನೆಯೇ. ಹಾಸಿಗೆ ಹಂಚಿಕೆಯ ಕೇಂದ್ರೀಕೃತ ವ್ಯವಸ್ಥೆಯ ತಂತ್ರಾಂಶಕ್ಕೆ ಲಾಗಿನ್‌ ಆಗುವುದು ಶಾಸಕರೋ ಅಥವಾ ಅಧಿಕಾರಿಗಳೋ. ಸಹಾಯವಾಣಿಗೆ ಸೋಂಕಿತರ ಕಡೆಯವರು ಕರೆ ಮಾಡಿದ ತಕ್ಷಣ ಹಾಸಿಗೆ ಒದಗಿಸುವುದು ವಾರ್‌ ರೂಂನ ಹೊಣೆ ಹೊತ್ತಐಎಎಸ್‌ ಅಧಿಕಾರಿ ಹಾಗೂ ಸಿಬ್ಬಂದಿಯ ಕರ್ತವ್ಯ. ಶಾಸಕನಾಗಿ ನಾನು ಅಧಿಕಾರಿಗೆ ಕರೆ ಮಾಡಿ ಇಂತಹ ರೋಗಿಗೆ ಹಾಸಿಗೆ ಒದಗಿಸಿ ಎಂದು ಕೇಳಬಹುದು ಅಷ್ಟೇ’ ಎಂದು ಶಾಸಕ ಸತೀಶ್‌ ರೆಡ್ಡಿ ತಿಳಿಸಿದರು.

‘ಸರ್ಕಾರಿ ಕೋಟಾದ ಹಾಸಿಗೆಗಳನ್ನು ಅಕ್ರಮವಾಗಿ ಹಂಚಿಕೆ ಮಾಡುವ ದಂಧೆಯಿಂದ ಗಮನವನ್ನು ಬೇರೆಡೆ ಸೆಳೆಯಲು ನನ್ನ ವಿರುದ್ಧ ಆರೋಪ ಮಾಡಲಾಗಿದೆ. ನಾನು ಹಾಸಿಗೆ ಬ್ಲಾಕ್‌ ಮಾಡಿದ ಬಗ್ಗೆ ದಾಖಲೆಗಳಿದ್ದರೆ, ಸಾಬೀತುಪಡಿಸಲಿ’ ಎಂದೂ ಹೇಳಿದರು.

Leave a Reply

Your email address will not be published. Required fields are marked *

error: Content is protected !!