ಈ ವೈನ್‌ ಬಾಟಲಿ ಬೆಲೆ ಕೇಳಿದರೆ ನೀವು ತಲೆ ತಿರುಗಿ ಬೀಳುವುದು ಗ್ಯಾರಂಟಿ!

file pic

ಲಂಡನ್: ಸಾಮಾನ್ಯವಾಗಿ ಮದ್ಯದ ದರವನ್ನು ತಯಾರಿಸುವ ಕಂಪನಿ, ಅದನ್ನು ಸೇವಿಸಿದರೆ ಏರುವ ಕಿಕ್‌ ಮತ್ತಿತರ ಅಂಶಗಳನ್ನು ಪರಿಗಣಿಸಿ ದರ ನಿಗದಿಪಡಿಸುತ್ತವೆ. ಈ ಕ್ರಮವಾಗಿ ಕೆಲವು ಮದ್ಯದ ಬಾಟಲ್‌ ನೂರು ರೂಪಾಯಿಗೆ ಲಭಿಸಿದರೆ ಮತ್ತೆ ಕೆಲವು ಸಾವಿರ ರೂಪಾಯಿಗೆ ಸಿಗುತ್ತವೆ.  ಅದೇ ವಿದೇಶಿ ಸರಕು ಬೇಕೆಂದರೆ ಲಕ್ಷಗಳನ್ನು ಖರ್ಚು ಮಾಡಬೇಕಾಗುತ್ತದೆ. ಇವುಗಳನ್ನೆಲ್ಲಾ ಮೀರಿಸಿ ಒಂದು ಬಾಟಲಿ ವೈನ್‌ ಬೆಲೆ ಕೋಟಿ ರೂಪಾಯಿಗಳ ಮೌಲ್ಯದ್ದು ಎಂದು ಅಂದಾಜಿಸಲಾಗಿದೆ.

ಅಷ್ಟೊಂದು ದುಬಾರಿ ಏಕೆ?
ಏಕೆಂದರೆ ಅದು ಬಾಹ್ಯಾಕಾಶದಲ್ಲಿ ಇದ್ದು, ಭೂಮಿಗೆ ಬಂದಿರುವ ವೈನ್ ಆಗಿದೆ..! ಅದರ ಬೆಲೆ ಕೂಡ ಅಷ್ಟೇ ಎತ್ತರದಲ್ಲಿದೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ವರ್ಷಕ್ಕೂ ಹೆಚ್ಚು ಕಾಲ ಕಳೆದ ಫ್ರೆಂಚ್ ವೈನ್ ಬಾಟಲಿಯನ್ನು ಕ್ರಿಸ್ಟೀಸ್ ಹರಾಜಿಗೆ ಇರಿಸಿದೆ. ಇದರ  ಮೌಲ್ಯ 10 ಲಕ್ಷ ಡಾಲರ್‌(ಅಂದಾಜು 7.37 ಕೋಟಿ) ಎಂದು  ಅಂದಾಜಿಸಲಾಗಿದೆ. ಬಾಟಲಿ ಹೆಸರು ‘ಪೆಟ್ರಸ್ 2000’ ಎಂದು ಕರೆಯಲಾಗುತ್ತದೆ. 

2019ರ ನವೆಂಬರ್‌ನಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಿದ್ದ 12 ವೈನ್ ಬಾಟಲಿಗಳಲ್ಲಿ ಇದು ಒಂದಾಗಿದೆ. ಭೂಮಿಯ ಹೊರಗೆ ಕೃಷಿ ಕುರಿತ ಸಂಶೋಧನೆಯ ಭಾಗವಾಗಿ ಖಾಸಗಿ ನವೋದ್ಯಮ ‘ಸ್ಪೇಸ್ ಕಾರ್ಗೋ ಅನ್ಲಿಮಿಟೆಡ್’ ವೈನ್‌ ಬಾಟಲಿಗಳನ್ನು ಅಲ್ಲಿಗೆ ಕಳುಹಿಸಿ,  14 ತಿಂಗಳ ನಂತರ ಅವುಗಳನ್ನು ಭೂಮಿಗೆ ತರಲಾಗಿದೆ.

ಫ್ರಾನ್ಸ್‌ನ ಬೋರ್ಡೆಕ್ಸ್‌ನಲ್ಲಿರುವ ಇನ್‌ಸ್ಟಿಟ್ಯೂಟ್ ಫಾರ್ ವೈನ್ ಅಂಡ್ ವೈನ್ ರಿಸರ್ಚ್‌ನ ಸಂಶೋಧಕರು ಈ ವೈನ್‌ ಬಾಟಲಿಗಳ ರುಚಿ ಪರೀಕ್ಷೆಗಳನ್ನು ನಡೆಸಿದ್ದಾರೆ. ಇಷ್ಟು ದಿನ ಭೂಮಿಯ ಮೇಲೆ ಹುದುಗಿಸಿದ ವೈನ್‌ ಗೆ ಹೋಲಿಸಿದರೆ, ರುಚಿಯಲ್ಲಿ ಎರಡರ ನಡುವೆ ವ್ಯತ್ಯಾಸವಿದೆ ಎಂದು ಹೇಳುತ್ತಾರೆ. ಬಾಹ್ಯಾಕಾಶದಲ್ಲಿರಿಸಿದ್ದ ಪಾನೀಯ ಮೃದು ಹಾಗೂ ಪರಿಮಳಯುಕ್ತವಾಗಿದೆ ಎಂದು ಹೇಳಲಾಗಿದೆ. ಕ್ರಿಸ್ಟೀಸ್ ವೈನ್ ಅಂಡ್ ಸ್ಪಿರಿಟ್ಸ್ ನಿರ್ದೇಶಕ ಟಿಮ್ ಟಿಪ್ಟ್ರೀ, ಬಾಹ್ಯಾಕಾಶದಲ್ಲಿ 14 ತಿಂಗಳ ಕಾಲ ವಿಶೇಷ ವಾತಾವರಣದಲ್ಲಿದ್ದ ವೈನ್ ಪರಿಪಕ್ವವಾಗಿದೆ ಎಂದು ಹೇಳಿದ್ದಾರೆ. ಪ್ರಸ್ತುತ ಈ ಬಾಟಲಿಯ ಬೆಲೆ ಇನ್ನು ದುಬಾರಿಯಾಗಿದೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

error: Content is protected !!