ಪರಿಸ್ಥಿತಿ ಕೈ ಮೀರುವ ಮುನ್ನಮುಂಜಾಗ್ರತೆ ಉತ್ತಮ, ತಿಂಗಳ ಮಟ್ಟಿಗೆ ಜನತಾ ಕರ್ಫ್ಯೂ ಪಾಲಿಸಿ: ರಘುಪತಿ ಭಟ್
ಉಡುಪಿ ಮೇ.4(ಉಡುಪಿ ಟೈಮ್ಸ್ ವರದಿ): ಜಿಲ್ಲೆಯ ಜನತೆ ಸಾರ್ವಜನಿಕ ಸಂಪರ್ಕಕ್ಕೆ ಬಾರದೆ ಜನತಾ ಕರ್ಫ್ಯೂ ನಿಯಮ ಪಾಲಿಸುವಂತೆ ಶಾಸಕ ರಘುಪತಿ ಭಟ್ ಅವರು ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲೆಯ ಕೋವಿಡ್ ಪರಿಸ್ಥಿತಿ ಕುರಿತು ಇಂದು ಪ್ರತಿಕ್ರಿಯೆ ನೀಡಿರುವ ಅವರು, ಜಿಲ್ಲೆಯಲ್ಲಿ ಈ ಹಿಂದೆ ಇದ್ದ ಪರಿಸ್ಥಿತಿ ಈಗ ಇಲ್ಲವಾಗಿದೆ. ಕೋವಿಡ್ ಪ್ರಕರಣ ಹೆಚ್ಚಾಗುತ್ತಿದ್ದು ಹಳ್ಳಿ ಕಡೆಗೂ ಸೋಂಕು ಹರಡುತ್ತಿದೆ. ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗಿ ಪತ್ತೆಯಾಗುತ್ತಿರುವುದರಿಂದ ಕನಿಷ್ಠ ಒಂದು ತಿಂಗಳ ಮಟ್ಟಿಗೆ ಜನರು ಜನತಾ ಕರ್ಫ್ಯೂ ನಿಯಮ ಪಾಲಿಸಿ ಯಾರೂ ಮನೆಯಿಂದ ಹೊರಗೆ ಬರದಿರುವುದು ಉತ್ತಮ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತು ಮುಂದುವರೆಸಿದ ಅವರು ಈ ಹಿಂದೆ ವಯಸ್ಸಾದವರು ಸೋಂಕಿಗೆ ಬಲಿಯಾಗುತ್ತಿದ್ದರು. ಆದರೆ ಈಗ ಚಿಕ್ಕ ವಯಸ್ಸಿನವರೂ ಸೋಂಕಿನಿಂದ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಎಲ್ಲಾ ರೋಗಿಗಳಿಗೆ ಆಮ್ಲಜನಕದ ಅವಶ್ಯಕತೆ ಎದುರಾಗುತ್ತಿದ್ದು ಆಮ್ಲಜನಕದ ಕೊರತೆ ಕಾಡುತ್ತಿದೆ. ಆದ್ದರಿಂದ ನಾಗರಿಕರು ಯಾರೂ ಸಾರ್ವಜನಿಕ ಸಂಪರ್ಕಕ್ಕೆ ಬಾರದೇ 15 ರಿಂದ 1ತಿಂಗಳು ಜನತಾ ಕರ್ಫ್ಯೂ ಪಾಲಿಸುವಂತೆ ಸೂಚಿಸಿದರು.
ಇನ್ನು ಜನತಾ ಕರ್ಫ್ಯೂ ಇನ್ನೂ ಸ್ವಲ್ಪ ದಿನ ಮುಂದುವರೆಯುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಪರಿಸ್ಥಿತಿ ಕೈ ಮೀರುವ ಮುನ್ನ ಮುಂಜಾಗ್ರತಾ ಕ್ರಮವಹಿಸುವುದು ಉತ್ತಮ ಎಂದರು.