ಉಡುಪಿ: 529 ಕೋವಿಡ್ ಪಾಸಿಟಿವ್ ದೃಢ, 549 ಮಂದಿ ಗುಣಮಖರಾಗಿ ಆಸ್ಪತ್ರೆಯಿಂದ ಬಿಡುಗಡೆ
ಉಡುಪಿ, ಮೇ.3(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಇಂದು 500 ಕ್ಕೂ ಅಧಿಕ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದರೂ ಕೂಡಾ ನಿನ್ನೆಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ.
ಪತ್ತೆಯಾಗುತ್ತಿರುವ ಪಾಸಿಟಿವ್ ಪ್ರಕರಣಗಳಿಗಿಂತ ಗುಣಮುಖರಾಗುತ್ತಿರುವ ಸೋಂಕಿತರ ಸಂಖ್ಯೆ ಅಧಿಕವಾಗಿರುವುದೇ ಇದಕ್ಕೆ ಕಾರಣ. ಜಿಲ್ಲೆಯಲ್ಲಿ ಇಂದು 529 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಮೇ.2 ರಂದು 549 ಮಂದಿ ಸೋಂಕಿತರು ಆಸ್ಪತ್ರೆಯಿಂದ ಗುಣಮಖರಾಗಿ ಬಿಡುಗಡೆ ಹೊಂದಿದ್ದಾರೆ.
ಇಂದು ಜಿಲ್ಲೆಯಲ್ಲಿ ಪತ್ತೆಯಾದ ಕೋವಿಡ್ ಪಾಸಿಟಿವ್ ಪ್ರಕರಣಗಳ ಪೈಕಿ ಉಡುಪಿಯಲ್ಲಿ 250, ಕುಂದಾಪುರ 202, ಕಾರ್ಕಳ 73 ಹಾಗೂ ಹೊರ ಜಿಲ್ಲೆಯ 4 ಮಂದಿಯಲ್ಲಿ ಕೋವಿಡ್ ಸೋಂಕು ಇರುವುದು ದೃಢ ಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸದ್ಯ 2,488 ಕೋವಿಡ್ ಸಕ್ರಿಯ ಪ್ರಕರಣಗಳಿವೆ.
ಮೇ. 2ರ ವೇಳೆಗೆ ಜಿಲ್ಲೆಯಲ್ಲಿ ಒಟ್ಟು 5,11,951 ಮಂದಿಯನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಿದ್ದು, ಈ ಪೈಕಿ 33154 ಮಂದಿಯಲ್ಲಿ ಸೋಂಕು ದೃಢ ಪಟ್ಟಿದೆ. ಈ ವರೆಗೆ ಜಿಲ್ಲೆಯ ಲ್ಲಿ 30,465 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ 201 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.