ಉಚಿತ ಸಾಮೂಹಿಕ ಲಸಿಕೆ ಅಭಿಯಾನ ದೇಶಾದ್ಯಂತ ಆರಂಭಿಸಿ- 13 ವಿರೋಧ ಪಕ್ಷಗಳ ನಾಯಕರ ಒತ್ತಾಯ
ನವದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆ ಅಬ್ಬರ ತೀವ್ರವಾಗಿದೆ. ದಿನನಿತ್ಯ ಸಾವಿರಾರು ಮಂದಿ ಸೋಂಕಿಗೆ ತುತ್ತಾಗುತ್ತಿದ್ದಾರೆ ಮತ್ತು ನೂರಾರು ಮಂದಿ ಬಲಿಯಾಗುತ್ತಿದ್ದಾರೆ.
ಈ ಮಧ್ಯೆ, ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಬೆಡ್, ಆಕ್ಸಿಜನ್ ಸಮಸ್ಯೆ ತೀವ್ರವಾಗಿದೆ. ಸರ್ಕಾರ ಸರಿಯಾದ ವೈದ್ಯಕೀಯ ವ್ಯವಸ್ಥೆ ಮಾಡುತ್ತಿಲ್ಲ ಎಂಬ ಆರೋಪ, ಕೂಗು ವಿರೋಧ ಪಕ್ಷಗಳ ನಾಯಕರಿಂದ ಮತ್ತು ಸಾರ್ವಜನಿಕರಿಂದಲೂ ಕೇಳಿಬರುತ್ತಿದೆ.
ಈ ಸಂದರ್ಭದಲ್ಲಿ 13 ವಿರೋಧ ಪಕ್ಷಗಳ ನಾಯಕರು ಜಂಟಿಯಾಗಿ ಪತ್ರ ಬರೆದು ಕೇಂದ್ರ ಸರ್ಕಾರವನ್ನು ದೇಶಾದ್ಯಂತ ಅತಿ ಶೀಘ್ರದಲ್ಲಿಯೇ ಉಚಿತ ಸಾಮೂಹಿಕ ಲಸಿಕೆ ಅಭಿಯಾನ ಆರಂಭಿಸಬೇಕೆಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ, ಎನ್ ಸಿಪಿ ನಾಯಕ ಶರದ್ ಪವಾರ್, ಶಿವಸೇನೆ ನಾಯಕ ಉದ್ಧವ್ ಠಾಕ್ರೆ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಜೆಎಂಎಂನ ಹೇಮಂತ್ ಸೊರೆನ್, ಡಿಎಂಕೆಯ ಎಂ ಕೆ ಸ್ಟಾಲಿನ್, ಬಿಎಸ್ ಪಿ ನಾಯಕಿ ಮಾಯಾವತಿ, ಜೆಕೆಪಿಎ ನಾಯಕ ಫರೂಕ್ ಅಬ್ದುಲ್ಲಾ, ಎಸ್ಪಿ ನಾಯಕ ಅಖಿಲೇಶ್ ಯಾದವ್, ಆರ್ ಜೆಡಿಯ ತೇಜಸ್ವಿ ಯಾದವ್, ಸಿಪಿಐನ ಡಿ ರಾಜಾ ಮತ್ತು ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಪತ್ರಕ್ಕೆ ಸಹಿ ಹಾಕಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಉಚಿತ ಸಾಮೂಹಿಕ ಕೋವಿಡ್-19 ಲಸಿಕೆ ಅಭಿಯಾನ ಆರಂಭಿಸುವಂತೆ ಕೇಳಿಕೊಂಡಿದ್ದಾರೆ.
ಆಸ್ಪತ್ರೆಗಳಿಗೆ ಮತ್ತು ಆರೋಗ್ಯ ಕೇಂದ್ರಗಳಿಗೆ ಅನಿಯಮಿತವಾಗಿ ಆಕ್ಸಿಜನ್ ಪೂರೈಕೆ ಮಾಡಬೇಕೆಂದು ಸಹ ಪತ್ರದಲ್ಲಿ ಒತ್ತಾಯಿಸಿದ್ದಾರೆ