ಸಾವಿರಾರು ನಿವೇಶನಗಳು ಭೂಮಾಲೀಕರ ತಪ್ಪಿಲ್ಲದೆ ನಿಷ್ಪ್ರಯೋಜಕ: ಅಮೃತ್ ಶೆಣೈ ಮನವಿ

ಉಡುಪಿ ಮೇ.2(ಉಡುಪಿ ಟೈಮ್ಸ್ ವರದಿ): ಉಡುಪಿ ಜಿಲ್ಲೆಯಲ್ಲಿ ಸಿಂಗಲ್ ಲೇಔಟ್ ನಲ್ಲಿ ಮನೆ ಕಟ್ಟಲು ಅವಕಾಶವಿಲ್ಲದೆ ನಿಷ್ಪ್ರಯೋಜಕವಾಗಿರುವ 2000 ಕ್ಕೂ ಅಧಿಕ ಸೈಟ್ ಗಳಿಗೆ ಪರಿಹಾರ ಕಲ್ಪಿಸುವಂತೆ ಶಾಸಕ ರಘುಪತಿ ಭಟ್ ಅವರಲ್ಲಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಮನವಿ ಮಾಡಿಕೊಂಡಿದ್ದಾರೆ.

ಈ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಭೂಮಿ ಮಾಲೀಕರಿಗೆ ಸಿಂಗಲ್ ಲೇಔಟ್ ಸಿಗದೆ ಮನೆ ಕಟ್ಟಲಾಗದೆ ಸಾವಿರಾರು ನಿವೇಶನಗಳು ಭೂ ಮಾಲಿಕರ ತಪ್ಪಿಲ್ಲದೆ ನಿಷ್ಪ್ರಯೋಜಕವಾಗಿ ಉಳಿದುಕೊಂಡಿದೆ. ಈ ಹಿಂದೆ ಸೈಟ್ ಖರೀದಿಸುವಾಗ ಕನಿಷ್ಠ ದಂಡ ವಿಧಿಸಿ ಸಿಂಗಲ್ ಲೇಔಟ್ ಕೊಡುತ್ತಿದ್ದರು. ಅನೇಕರು ಅದನ್ನು ಫೀಸ್ ಎಂದುಕೊಂಡಿದ್ದರು. ಆಗ ಖರೀದಿಸಿದ ಭೂಮಿ ಭೂ ಮಾಲಿಕರ ಹೆಸರಲ್ಲೇ ರಿಜಿಸ್ಟರ್ ಆಗಿದೆ. ಸಬ್ ರಿಜಿಸ್ಟ್ರಾರ್ ನೋಂದಾವಣಿ ಕೂಡಾ ಮಾಡಿದ್ದಾರೆ, ತಹಶಿಲ್ದಾರರು ಆರ್ ಟಿಸಿ ಕೊಟ್ಟಿದ್ದಾರೆ. ಆದರೆ ಈಗ ಮನೆ ಕಟ್ಟಲು ಅನುಮತಿ ಸಿಗುತ್ತಿಲ್ಲ. ಕೇಳಿದರೆ ಅಕ್ರಮ ಎನ್ನುತ್ತಾರೆ. ಹಾಗಾದರೆ ಈ ಅಕ್ರಮದಲ್ಲಿ ತಹಶಿಲ್ದಾರ್, ಸಬ್ ರಿಜಿಸ್ಟ್ರಾರ್ ಪಾರ್ಟಿ ಆಗುವುದಿಲ್ಲವೆ ಎಂದು ಪ್ರಶ್ನಿಸಿದ ಅವರು,      ಸಿಂಗಲ್ ಲೇಔಟ್ ಸಿಗದ ಕಾರಣ ಈ ಭೂಮಿಗಳು ಮನೆಕಟ್ಟಲಾಗದೆ ಹಾಗೇ ಉಳಿದುಕೊಂಡಿದೆ ಆದ್ದರಿಂದ ಶಾಸಕರು ಈ ಬಗ್ಗೆ ಸೂಕ್ತ ಪರಿಹಾರ ನೀಡುವಂತೆ ಕೇಳಿಕೊಂಡಿದ್ದಾರೆ.

ಈ ವೇಳೆ ಶಾಸಕರ ರಸ್ತೆ ಅಗಲೀಕರಣ ಹಾಗೂ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಪರ ಚಟುವಟಿಕೆಗಳನ್ನು ಅಭಿನಂದಿಸಿದ ಅವರು ಹಡೀಲು ಭೂಮಿಯಲ್ಲಿ ಕೃಷಿ ಕಾರ್ಯಚಟುವಟಿಕೆ ಕೈಗೊಂಡಿರುವ ಶಾಸಕರ ಕಾರ್ಯವನ್ನು ಶ್ಲಾಘಿಸಿದರು. ಆದರೆ ಈ ಈ ವಿಚಾರವಾಗಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಅವರು ಶಾಸಕರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ. ಹಡೀಲು ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಹಡೀಲು ಭೂಮಿಯನ್ನು ಕೇದಾರೋಥ್ಥಾನ ಟ್ರಸ್ಟ್ ಗೆ  ಕೃಷಿ ಮಾಡಲು ಬಿಟ್ಟು ಕೊಡದಿದ್ದರೆ ಜಿಲ್ಲಾಧಿಕಾರಿಯವರು ಅದನ್ನು ವಶಕ್ಕೆ ಪಡೆದು ಟ್ರಸ್ಟ್ ಗೆ ನೀಡುತ್ತಾರೆ ಎಂಬ ಹೇಳಿಕೆಯನ್ನು ಪ್ರಶ್ನಿಸಿದ ಅವರು, ಕಾನೂನಿನಲ್ಲಿ ಈ ಕಾರ್ಯ ಕ್ಕೆ ಅವಕಾಶ ಇದೆಯಾ ಎಂದು ಕೇಳಿದ್ದಾರೆ. ಇದೇ ವೇಳೆ ಜಿಲ್ಲಾಧಿಕಾರಿಗೆ ಒಬ್ಬರ  ಖಾಸಗಿ ಭೂಮಿಯನ್ನು ವಶಪಡಿಸಿಕೊಳ್ಳಲು ಅವಕಾಶವಿಲ್ಲ ಹಾಗೋಂದು ವೇಳೆ ಅವಕಾಶವಿದ್ದರೂ ಟ್ರಸ್ಟ್ ಗಳಿಗೆ ನೀಡುವ ಅವಕಾಶ ಖಂಡಿತಾ ಇಲ್ಲ ಎಂದು ಹೇಳಿದ್ದಾರೆ.

ಇದೇ ವಿಚಾರವಾಗಿ ಈ ಕೃಷಿ ಚಟುವಟಿಕೆಗಳಿಗೆ ಶಾಸಕರು ಕೋಟ್ಯಾಂತರ ರೂ. ಖರ್ಚು ಮಾಡುವುದಾಗಿ ತಿಳಿಸಿದ್ದು ಈ ಬಗ್ಗೆ  ಪ್ರಶ್ನಿಸಿದ ಅಮೃತ್ ಶೆಣೈ ಅವರು, ಕಳೆದ ವರ್ಷದಿಂದ ಕೋವಿಡ್ ನಿಂದಾಗಿ ಆರ್ಥಿಕ ಪರಿಸ್ಥಿತಿ ಹಾಳಾಗಿ ಹೋಗಿದೆ. ಹೀಗಿರುವಾಗ ಟ್ರಸ್ಟ್ ನ ಈ ಕಾರ್ಯಕ್ಕೆ ಕೋಟ್ಯಂತರ ರೂ. ಯಾರು ಬಂಡವಾಳ ಕೊಡುತ್ತಾರೆ. ಇದಕ್ಕಾಗಿ ಹೂಡಿಕೆ ಮಾಡುವ ಹೂಡಿಕೆದಾರರಿಗೆ ಲಾಭವಿಲ್ಲದೆ ಹಣ ವಾಪಸ್ಸು ನೀಡುತ್ತೀರಾ ಮತ್ತು ಭೂಮಿಯ ಮಾಲಿಕರಿಗೆ ಏನು ನೀಡುತ್ತೀರಾ ಎಂದು ಕೇಳಿದರು.

ಹಾಗೂ ನಿಟ್ಟೂರಿನಲ್ಲಿ ಕೈಗೊಂಡಿದ್ದ ಹಡೀಲು ಭೂಮಿ ಕೃಷಿಯ ಪ್ರಾಯೋಗಿಕ ಕಾರ್ಯಕ್ರಮದಲ್ಲಿ ಮಾಹಿತಿ ಹಂಚಿಕೊಳ್ಳುವಾಗ ಮುರಳಿ ಕಡೆಕಾರ್ ಅವರ ಯೋಜನೆಯಲ್ಲಿ ಬೆಳೆದ ಅಕ್ಕಿಯನ್ನು ಕೊಂಡುಕೊಳ್ಳಲು ಗ್ರಾಹಕರಿಲ್ಲ‌ ಎಂಬ ಮಾತಿಗೆ ಸಂಬಂಧಿಸಿ ಪ್ರಶ್ನಿಸಿದ ಅವರು.2000 ಎಕರೆಯಲ್ಲಿ ಅನೇಕ ಕ್ವಿಂಟಾಲ್ ಅಕ್ಕಿ ಬೆಳೆಯುವಾಗ ಇದನ್ನು ಮಾರುಕಟ್ಟೆ ನೀಡುವಾಗ ಈ ಅಕ್ಕಿಯನ್ನು ತೆಗೆದುಕೊಳ್ಳುವವರು ಯಾರು ಎಂದು ಪ್ರಶ್ನಿಸಿದರು. ಅಲ್ಲದೆ ಈ ಯೋಜನೆ ಬಳಿಕ‌ ಮುಂದಿನ ವರ್ಷ ಗಳಲ್ಲಿ  ಆ ಭೂಮಿಯಲ್ಲಿ ಕೃಷಿ ಮಾಡಲು ಭೂ ಮಾಲಕರಿಗೆ ಬಂಡವಾಳ ಯಾರು ನೀಡುತ್ತಾರೆ ಎಂದು ಕೇಳಿದರು.

ಜೊತೆಗೆ ಇದು ಸುಧೀರ್ಘವಾದ ವಿಚಾರವಾಗಿರುವುದರಿಂದ ಈ ಬಗ್ಗೆ ದೂರಗಾಮಿ ಯೋಜನೆಗಳನ್ನು ಯಾವ ರೀತಿ ಹಾಕಿ ಕೊಂಡಿದ್ದೀರಾ ಎಂದು ಕೇಳಿದರು. ಇದೇ ವೇಳೆ ತಾವು ಕೇಳಿದ ಪ್ರಶ್ನೆಗಳಿಗೆ ಶಾಸಕರಿಂದ ಉತ್ತರ ನಿರೀಕ್ಷಿಸುವುದಾಗಿ ತಿಳಿಸಿದರು. ಇನ್ನು ಜಿಲ್ಲೆಯಲ್ಲಿ ಕೋವಿಡ್ ಸಂಕಷ್ಟದ ಸಮಯದಲ್ಲಿ ಸಹಾಯವಾಣಿ ತೆರೆದು ಜನರ ಸಮಸ್ಯೆಗೆ ಸ್ಪಂದನೆ ನೀಡಿರುವ ಉಡುಪಿ, ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 

Leave a Reply

Your email address will not be published. Required fields are marked *

error: Content is protected !!