ಲಾಕ್ ಡೌನ್ ಪರಿಷ್ಕೃತ ಆದೇಶ: ಇಂದಿನಿಂದಲೇ ಜಾರಿ- ಹೊಸ ನಿಯಮ ಏನೆಂದು ಇಲ್ಲಿದೆ ಮಾಹಿತಿ
ಬೆಂಗಳೂರು,ಮೇ2: ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಅಂಗಡಿಮುಂಗಟ್ಟುಗಳಲ್ಲಿ ನೂಕು ನುಗ್ಗಲನ್ನು ತಪ್ಪಿಸುವ ಸಲುವಾಗಿ ರಾಜ್ಯಸರ್ಕಾರ ಹೊಸ ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿದೆ.
ಬೆಳಿಗ್ಗೆ 6 ರಿಂದ 10 ರ ವರೆಗೆ ಮಾತ್ರ ಹಣ್ಣು ತರಕಾರಿಗಳನ್ನು ಮಾರಾಟ ಮಾಡಲು ಅವಕಾಶ ನೀಡಿದ್ದರಿಂದ ಎಲ್ಲ ಉತ್ಪನ್ನ ಮಾರಾಟ ಮಾಡಲಾಗದೆ ರೈತರು ಸಮಸ್ಯೆಗೆ ಸಿಲುಕಿದ್ದು, ಇದೀಗ ಬೆಳಿಗ್ಗೆ 6 ರಿಂದ ಸಂಜೆ 6 ರ ವರೆಗೆ ಹಣ್ಣು ತರಕಾರಿಗಳನ್ನು ತಳ್ಳುವ ಗಾಡಿಗಳ ಮೂಲಕ ಮಾರಾಟ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಆಗುತ್ತಿರುವ ನೂಕುನುಗ್ಗಲು, ಜನಸಂದಣಿ ತಪ್ಪಿಸಲು ಕೆಲವು ಬದಲಾವಣೆ ಮಾಡಲಾಗಿದೆ. ಎಲ್ಲಾ ರೀತಿಯ ಸಂತೆ, ವಾರದ ಸಂತೆಗಳನ್ನು ನಿರ್ಬಂದಿಸಲಾಗಿದೆ. ಈ ಮಾರ್ಗಸೂಚಿ ರಾಜ್ಯಾದ್ಯಂತ ಇಂದಿನಿ0ದಲೇ ಜಾರಿಗೆ ಬರಲಿದೆ.
ಹೊಸ ಮಾರ್ಗಸೂಚಿಯಲ್ಲಿ ಹಾಪ್ ಕಾಮ್ಸ್, ಎಲ್ಲಾ ಹಾಲಿನ ಬೂತುಗಳು ತಳ್ಳುಗಾಡಿಗಳಲ್ಲಿ ಹಣ್ಣು ಮತ್ತು ತರಕಾರಿ ಮಾರಾಟ ಮಾಡಲು ಅವಕಾಶ ನೀಡಲಾಗಿದ್ದು, ಕೋವಿಡ್ ನಿಯಮಾವಳಿಗಳನ್ನು ಅನುಸರಿಸಿ ಬೆಳಿಗ್ಗೆ ಆರು ಗಂಟೆ ಯಿಂದ ಸಂಜೆ ಆರು ಗಂಟೆಯ ವರೆಗೆ ಮಾರಾಟ ಮಾಡಬಹುದಾಗಿದೆ.ಎಪಿಎಮ್ ಸಿ ಹಾಗೂ ದಿನಸಿ ಅಂಗಡಿಗಳ ವ್ಯಾಪಾರದ ಸಮಯದಲ್ಲೂ ಬದಲಾವಣೆ ಮಾಡಿದ್ದು, ಹೊಸ ಮಾರ್ಗಸೂಚಿಯಲ್ಲಿ ಬೆಳ್ಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯ ವರೆಗೆ ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ.
ಈ ಆದೇಶವನ್ನು ಮಹಾನಗರ ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಪೊಲೀಸ್ ಆಯುಕ್ತರು, ಇಲಾಖೆಗಳ ಮುಖ್ಯಸ್ಥರ ಮೂಲಕ ಜಾರಿ ಮಾಡಲು ಸೂಚಿಸಲಾಗಿದೆ.