ಉಡುಪಿ: ಟ್ರಾಫಿಕ್ ನಿಯಮ ಉಲ್ಲಂಘಿಸಿದ ಯುವತಿ- ದಂಡ ಕಟ್ಟಲು ಸೂಚಿಸಿದಾಗ ಎಸ್ಐಗೆ ಆವಾಜ್
ಉಡುಪಿ ಮೇ.1: ಯೊಬ್ಬಳು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಲ್ಲದೆ ಪೊಲೀಸರು, ದಂಡ ಕಟ್ಟಲು ಸೂಚಿಸಿದಾಗ ಟ್ರಾಫಿಕ್ ಎಸ್ಐಗೆ ಧಮ್ಕಿ ಹಾಕಿದ ಘಟನೆ ನಗರದ ಕ್ಲಾಕ್ ಟವರ್ ಬಳಿ ನಡೆದಿದೆ.
ಜಿಲ್ಲೆಯಲ್ಲಿ 14 ದಿನಗಳ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಪೊಲೀಸರು ನಗರದಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದವರ ವಿರುದ್ಧ ಕ್ರಮಕೈಗೊಳ್ಳವ ಸಲುವಾಗಿ ಕಾರ್ಯಪ್ರವೃತ್ತರಾಗಿದ್ದರು. ಈ ವೇಳೆ ನೀತಾ ಪ್ರಭು ಮೊಬೈಲ್ ನಲ್ಲಿ ಮಾತನಾಡಿಕೊಂಡು ಕಾರು ಚಲಾಯಿಸಿಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಇದನ್ನು ಕಂಡ ಟ್ರಾಫಿಕ್ ಎಸ್ ಐ ಅಬ್ದುಲ್ ಖಾದರ್ ಅವರು ಯುವತಿಗೆ ಕಾರು ಬದಿಗೆ ಹಾಕಿ ದಂಡ ಪಾವತಿಸುವಂತೆ ತಿಳಿಸಿದ್ದರು.
ಈ ವೇಳೆ ಕೋಪಗೊಂಡ ಯುವತಿ ಎಸ್ಐ ವಿರುದ್ಧವೇ ರೇಗಾಡಿದ್ದು ಅಲ್ಲದೆ, ಮೊಬೈಲ್ ನಲ್ಲಿ ದೃಶ್ಯವನ್ನು ಚಿತ್ರೀಕರಿಸುತ್ತಿದ್ದ ಇತರ ಸಿಬ್ಬಂದಿ ವಿರುದ್ಧವೂ ರೇಗಾಡಿದ್ದಾಳೆ. ಚಿತ್ರೀಕರಣ ನಿಲ್ಲಿಸುವಂತೆ ಇತರ ಸಿಬ್ಬಂದಿಗಳಿಗೆ ಗದರಿಸಿದ ಯುವತಿ ನೀವು ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಈ ವೇಳೆ ಯುವತಿಗೆ ಉತ್ತರಿಸಿದ ಟ್ರಾಫಿಕ್ ಎಸ್ ಐ ಖಾದರ್ ಅವರು, ನಾವು ಕೋವಿಡ್ ಕರ್ಪ್ಯೂ ಹಿನ್ನಲೆಯಲ್ಲಿ ನಗರದಲ್ಲಿ ಅನಗತ್ಯವಾಗಿ ತಿರುಗಾಡುವರ ಮೇಲೆ ಕ್ರಮ ಕೈಗೊಳ್ಳುತ್ತಿದ್ದೇವೆ. ನಾವು ನಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದೇವೆ. ರಸ್ತೆ ನಿಯಮ ಉಲ್ಲಂಫಿಸಿದರೆ ಸುಮ್ಮನೆ ನೋಡಿಕೊಂಡು ಕೂರಲು ಆಗಲ್ಲ ಎಂದು ಖಡಕ್ ಆಗಿ ಎಚ್ಚರಿಸಿದ್ದಾರೆ.