ಬೈಂದೂರು: ಕ್ರಿಕೆಟ್ ಆಟದ ಮೈದಾನಕ್ಕೆ ಪೊಲೀಸ್ ದಾಳಿ- ಎದ್ವೋ ಬಿದ್ವೋ ಓಡಿದ ಆಟಗಾರರು…

ಉಡುಪಿ ಮೇ.1 (ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಕೋವಿಡ್ ಪ್ರಭಾವವನ್ನು ನಿಯಂತ್ರಿಸುವ ಸಲುವಾಗಿ ಸರಕಾರ ಜಾರಿಮಾಡಿರುವ ಲಾಕ್ ಡೌನ್ ನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತಿದೆ. ಆದರೆ ಅನೇಕ ಕಡೆಗಳಲ್ಲಿ ಸರಕಾರದ ನಿಯಮಗಳನ್ನು ಅನೇಕ ಮಂದಿ ಉಲ್ಲಂಘಿಸುತ್ತಿದ್ದಾರೆ. 

ಈ ನಿಟ್ಟಿನಲ್ಲಿ ನಿಯಮವನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿ ಕೊಳ್ಳುವ ಸಲುವಾಗಿ ಪೊಲೀಸರು ಕರ್ತವ್ಯ ನಿರತರಾಗಿದ್ದಾರೆ. ಇದೀಗ ಜಿಲ್ಲೆಯ ಕಾರ್ಕಳ, ಪಡುಬಿದ್ರೆ ಹಾಗೂ ಬೈಂದೂರಿನಲ್ಲಿ ನಿಯಮ‌ ಉಲ್ಲಂಘಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅನಗತ್ಯವಾಗಿ ಇದ್ದ ಅನೇಕರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ಪೈಕಿ ಕಾರ್ಕಳದ ಬೆಳ್ಮಣ್ ಬಸ್ ನಿಲ್ದಾಣದ ಬಳಿ ಇಬ್ಬರು ದ್ವಿಚಕ್ರ ವಾಹನದಲ್ಲಿ ಮಾಸ್ಕ್ ಹಾಗೂ ಹೆಲ್ಮೆಟ್ ಧರಿಸದೆ ವಾಹನ  ಚಲಾಯಿಸಿಕೊಂಡು ಹೋಗಿದ್ದು ಪೊಲೀಸರು ಸೂಚನೆ ನೀಡಿದರೂ ನಿಲ್ಲಿಸದೇ ಹೋಗಿದ್ದು ಈ ಬಗ್ಗೆ ಕೋವಿಡ್ ನಿಯಮವನ್ನು ಉಲ್ಲಂಘಿಸಿರುವುದಾಗಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಡುಬಿದ್ರೆಯಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಅನಗತ್ಯ ಓಡಾಟ ನಡೆಸಿರುವುದಾಗಿ ಬೈಕ್ ಸವಾರರಾದ ಹರಿ ಪ್ರಸಾದ್, ಶಂಶುದ್ದೀನ್ ರನ್ನು ವಶಕ್ಕೆ ಪಡೆದು ಪೊಲೀಸರು ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇನ್ನು ಬೈಂದೂರಿನಲ್ಲಿ ಕೆಲವು ವ್ಯಕ್ತಿಗಳು ಬೈಕ್ ನಿಲ್ಲಿಸಿ ಯಾವುದೇ ಕೋವಿಡ್ ನಿಯಮ ಪಾಲಿಸದೇ ಸಾರ್ವಜನಿಕ ಸ್ಥಳದಲ್ಲಿ ಆಟವಾಡುತ್ತಾ ಇದ್ದು,ಪೊಲೀಸರು ಸ್ಥಳಕ್ಕೆ ತೆರಳಿದಾಗ ವ್ಯಕ್ತಿಗಳು ಪರಾರಿಯಾಗಿದ್ದಾರೆ, ಸ್ಥಳದಲ್ಲಿ ಇದ್ದ 2 ಬೈಕ್, 3 ಕ್ರಿಕೆಟ್ ಸ್ಟಂಪ್, ಟೆನ್ನಿಸ್ ಬಾಲ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!