ಪಡುತೋನ್ಸೆ ಅಕ್ರಮ ಮರಳುಗಾರಿಕೆಗೆ ದಾಳಿ- ಮಹಿಳಾ ಅಧಿಕಾರಿಗೆ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿ
ಮಲ್ಪೆ ಮೆ.1,(ಉಡುಪಿ ಟೈಮ್ಸ್ ವರದಿ): ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆ ಬಂದ ದೂರಿನ ಮೇರೆಗೆ ದಾಳಿ ನಡೆಸಲು ಹೋದ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಘಟನೆ ಪಡುತೋನ್ಸೆ ಗ್ರಾಮದ ಕಂಬಳತೋಟ ಪರಿಸರದಲ್ಲಿ ನಡೆದಿದೆ.
ಈ ಭಾಗದಲ್ಲಿ ಅನಧೀಕೃತವಾಗಿ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಸಂಧ್ಯಾ ಕುಮಾರಿ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದರು. ಅಧಿಕಾರಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದಾಗ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಇರ್ಷಾದ್ ಸ್ಥಳಕ್ಕೆ ಬಂದು ನನ್ನ ಮರಳು ಧಕ್ಕೆಯನ್ನು ಪರಿಶೀಲಿಸಲು ನಿಮಗೇನು ಆಧಾರವಿದೆ, ನಿಮ್ಮನ್ನು ಇಲ್ಲಿಂದ ಹೋಗಲು ಬಿಡುವುದಿಲ್ಲ ಎಂದು ಬೆದರಿಸಿರುತ್ತಾನೆ.
ಈ ವೇಳೆ ಸಂಧ್ಯಾ ಕುಮಾರಿರವರು ಮರಳು ಧಕ್ಕೆಯ ತೋಟದಲ್ಲಿದ್ದ ಟಿಪ್ಪರ್ ವಾಹನವನ್ನು ಪರಿಶೀಲಿಸಲು ಹೋದಾಗ ಆರೋಪಿಯು ಐದಾರು ಜನರ ಗುಂಪು ಸೇರಿಸಿಕೊಂಡು ಕಛೇರಿ ವಾಹನದ ಚಾಲಕನಿಗೆ ಹೊಡೆಯಲು ಪ್ರಯತ್ನಿಸಿದ್ದಾನೆ. ನಂತರ ಇಲಾಖಾ ವಾಹನವನ್ನು ಚಲಾಯಿಸಿಕೊಂಡು ಹೋಗುವಂತೆ ಚಾಲಕನಿಗೆ ತಿಳಿಸಿದಾಗ ಆರೋಪಿಯು ಕಾರನ್ನು ಅಡ್ಡ ಇರಿಸಿ ನಿನ್ನನ್ನು ಸುಮ್ಮನೆ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುತ್ತಾನೆ, ಈ ವೇಳೆ ತಡೆಯಲು ಹೋದ ಸಂಧ್ಯಾ ಕುಮಾರಿರವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಾಗಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.