ಪಾರ್ಕಿಂಗ್ ದರ ಏರಿಕೆ ವಿರೋಧಿಸಿ’ಮಂಗಳೂರು ವಿಮಾನ ನಿಲ್ದಾಣ ಚಲೋ’- ಶ್ರೀರಾಮಸೇನೆ ಎಚ್ಚರಿಕೆ
ಉಡುಪಿ: ಕೇಂದ್ರ ಸರಕಾರ ಇತ್ತೀಚಿಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಹುಜನರ ವಿರೋಧದ ನಡುವೆಯೇ ಖಾಸಗೀಕರಣಗೊಳಿಸಿ ಅದಾನಿ ಎಂಬ ಕಂಪೆನಿಗೆ ಗುತ್ತಿಗೆ ನೀಡಿತ್ತು. ಈಗ ನಿಧಾನವಾಗಿ ಅದಾನಿ ಕಂಪೆನಿ ಜನರ ರಕ್ತ ಹೀರಲು ಆರಂಭಿಸುತ್ತಿದೆ.
ಟ್ಯಾಕ್ಸಿ ಚಾಲಕರಿಂದ ಇದುವರೆಗೆ ಪಡೆಯುತ್ತಿದ್ದ ಪಾರ್ಕಿಂಗ್ ಶುಲ್ಕವನ್ನು 20 ರೂ. ನಿಂದ ಬರೋಬ್ಬರಿ 90 ರೂಪಾಯಿಗೆ ಏರಿಸಿದ್ದಾರೆ. ಅದೂ ಅರ್ಧ ತಾಸಿಗೆ. ಇನ್ನು ಮುಂದೆ ಉಡುಪಿಯಿಂದ ವಿಮಾನ ನಿಲ್ದಾಣಕ್ಕೆ ಹೋಗಲು 250 ರೂ. ಟೋಲ್ ಮತ್ತು ಪಾರ್ಕಿಂಗ್ ಶುಲ್ಕ ಕಟ್ಟಬೇಕು. ಇದ್ಯಾವ ನ್ಯಾಯ? ಕೊರೋನಾ ದಿಂದ ಟ್ಯಾಕ್ಸಿ ಮಾಲ್ಹಕರು ಹೈರಾಣಾಗಿರುವ ಈ ಸಂದರ್ಭದಲ್ಲಿ ಇದರ ಅಗತ್ಯವಿತ್ತೇ ? ಇಡೀ ದೇಶವೇ ಕರೋನಾ ಲಾಕ್ಡೌನ್ ನಿಂದಾಗಿ ತತ್ತರಿಸಿ ಹೋಗಿದೆ. ಜನರ ಬದುಕು ಶೋಚನೀಯವಾಗಿದೆ. ಟ್ಯಾಕ್ಸಿ ಚಾಲಕರ ಪಾಡಂತೂ ಕೇಳುವವರಿಲ್ಲ. ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಶುಲ್ಕ ಏರಿಸುವಂತಹ ಅದಾನಿ ಕಂಪೆನಿಯವರ ಮನಸ್ಥಿತಿ ಎಷ್ಟು ಕೀಳು ಮಟ್ಟದ್ದು ಎಂದು ಊಹಿಸೋದು ಕಷ್ಟ.
ರಾಷ್ಟ್ರೀಯ ಹೆದ್ದಾರಯಲ್ಲಿ ಅವೈಜ್ಞಾನಿಕವಾಗಿ ಟೋಲ್ ನಿರ್ಮಿಸಿ ಜನರಿಂದ (ಟ್ಯಾಕ್ಸಿಗಳಿಂದ) ಹಣ ಸಂಗ್ರಹ ಮಾಡುತ್ತಿರುವಾಗಲೂ ನಮ್ಮ ಅವಿಭಜಿತ ದ.ಕ ಜಿಲ್ಲೆಯ ಜನಪ್ರತಿನಿಧಿಗಳು ಮೌನ ವಹಿಸಿದರು. ಕಳೆದ ಒಂದುವರೆ ವರ್ಷದಿಂದ ಕೊರೋನಾ ಕಾರಣದಿಂದ ಬಾಡಿಗೆಯೂ ಇಲ್ಲದೇ, ಬ್ಯಾಂಕ್ ಲೋನ್ ಕಟ್ಟಲೂ ಆಗದೇ, ಮನೆಯಲ್ಲಿ ವಿಷಮ ಸ್ಥಿತಿಯನ್ನು ನಿರ್ಮಿಸಿಕೊಂಡಿರುವ ಟ್ಯಾಕ್ಸಿ ಮ್ಹಾಲಕರನ್ನು/ಚಾಲಕರ ಬಗ್ಗೆ ಯಾವುದಾದರೂ ಜನಪ್ರತಿನಿಧಿಗಳು ಮಾತನಾಡಿಲ್ಲ.
ದ.ಕ ಮತ್ತು ಉಡುಪಿಯಿಂದ ಆಯ್ಕೆಯಾದ ಶಾಸಕರು ಮತ್ತು ಸಂಸದರು ಮೌನವಾಗಿರುವುದರ ಹಿಂದಿರುವ ಗುಟ್ಟೇನು? ಅದಾನಿಯಿಂದ ಜೋಳಿಗೆ ಬಂದಿದೆಯೇ? ಅದರಲ್ಲೂ ಟ್ಯಾಕ್ಸಿಯವರಿಂದಲೇ ಶಾಸಕರಾದ ಶಾಸಕರು ಮೌನವಹಿಸಿರುವುದು ಅನುಮಾನ ಮೂಡಿಸುತ್ತದೆ!. ಇದನ್ನೆಲ್ಲಾ ಮನಗಂಡ ಶ್ರೀರಾಮಸೇನೆ ಯು ಟ್ಯಾಕ್ಸಿ ಚಾಲಕ/ಮ್ಹಾಲ್ಹಕರ ಪರವಾಗಿ ನಿಲ್ಲಲಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿಯವರಿಗೆ ಹಿಂದಿನ ದರವನ್ನೇ ನಿಗದಿಪಡಿಸದಿದ್ದರೆ ದ.ಕ ಮತ್ತು ಉಡುಪಿ ಜಿಲ್ಲಾ ಶ್ರೀರಾಮಸೇನೆಯು ಸದ್ಯದಲ್ಲೇ ಮಂಗಳೂರು ವಿಮಾನ ನಿಲ್ದಾಣ ಚಲೋ ಮಾಡಲಿದೆ ಎಂದು ಶ್ರೀರಾಮಸೇನೆ ಉಡುಪಿ ಜಿಲ್ಲಾ ಅಧ್ಯಕ್ಷ ಜಯರಾಂ ಅಂಬೆಕಲ್ಲು ಸರಕಾರ ಹಾಗೂ ಅವಿಭಜಿತ ದ.ಕ ಜಿಲ್ಲಾ ಜನಪ್ರತಿನಿದಿಗಳಿಗೆ ಎಚ್ಚರಿಕೆ ನೀಡಿದ್ದಾರೆ.