ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್’ಗೆ ಭರ್ಜರಿ ಗೆಲುವು, ಮುದುಡಿದ ಕಮಲ

ಬೆಂಗಳೂರು: ಕೊರೋನಾ ಎರಡನೇ ಅಲೆಯ ಬಿಕ್ಕಟ್ಟಿನ ನಡುವೆಯೇ ಬಳ್ಳಾರಿ ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ 10 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕೈ ಅರಳಿ ಕಮಲ ಮುದುಡಿ ಎರಡು ಕಡೆ ತೆನೆಹೊತ್ತ ಮಹಿಳೆ ಕೊಂಚ ನಗುಬೀರಿದ್ದಾಳೆ.

ರಾಮನಗರ ನಗರಸಭೆ ಕಾಂಗ್ರೆಸ್ ತೆಕ್ಕೆಗೆ ಸೇರಿದೆ. ಸ್ಪಷ್ಟ‌ ಬಹುತದೊಂದಿಗೆ ಕಾಂಗ್ರೆಸ್​ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಒಟ್ಟು 31 ವಾರ್ಡ್​ಗಳ ಪೈಕಿ ಕಾಂಗ್ರೆಸ್ 19 ಹಾಗೂ ಜೆಡಿಎಸ್​​​ 11 ವಾರ್ಡ್​ನಲ್ಲಿ ಗೆಲುವು ಸಾಧಿಸಿದ್ದರೆ, ಒಂದು ವಾರ್ಡ್​ನಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ. ಬಿಜೆಪಿ ಒಂದು ವಾರ್ಡ್​ನಲ್ಲೂ ಖಾತೆ ತೆರೆದಿಲ್ಲ. ಇದರಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ರಾಮನಗರ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ್ ಗೆ ಮುಖಭಂಗವಾದಂತಿದೆ.

ಹಾಸನದ ಬೇಲೂರು ಪುರಸಭೆ ಮೊದಲ ಬಾರಿಗೆ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದ್ದು, ಶತಾಯ ಗತಾಯ ಗೆಲುವು ಸಾಧಿಸಬೇಕು ಎಂದುಕೊಂಡಿದ್ದ ಜೆಡಿಎಸ್​ಗೆ ಮುಖಭಂಗವಾಗಿದೆ. 25 ವಾರ್ಡ್​ನಲ್ಲಿ ಕಾಂಗ್ರೆಸ್​ ಗೆಲುವು ಸಾಧಿಸಿದ್ದು, 5 ವಾರ್ಡ್​ನಲ್ಲಿ ಜೆಡಿಎಸ್​ಗೆ ಗೆಲುವಾದರೆ, ಕೇವಲ ಒಂದು ಕಡೆ ಬಿಜೆಪಿ ಗೆಲುವು ಸಾಧಿಸಿದೆ.

ಇನ್ನು ಶಿವಮೊಗ್ಗದಲ್ಲಿ ಜಿಲ್ಲೆಯ ಭದ್ರಾವತಿ ನಗರಸಭೆ ಚುನಾವಣೆಯಲ್ಲಿ ಒಟ್ಟು 35 ವಾರ್ಡ್​ಗಳಲ್ಲಿ ಕಾಂಗ್ರೆಸ್​ 18 ವಾರ್ಡ್​ಗಳಲ್ಲಿ ಗೆಲುವು ಸಾಧಿಸಿದೆ. ಉಳಿದ 4 ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ. ಇನ್ನು 25 ವರ್ಷಗಳಿಂದ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಚುನಾವಣೆಯಲ್ಲಿ ಅಧಿಪತ್ಯಕ್ಕೆ ಸಾಧಿಸಿಕೊಂಡು ಬಂದಿರುವ ಬಿಜೆಪಿಗೆ ಈ ಬಾರಿ ಮುಖಭಂಗವಾಗಿದೆ. ಈ ಬಾರಿ ಚುನಾವಣೆಯಲ್ಲಿ 15 ವಾರ್ಡ್​ಗಳ ಪೈಕಿ 9ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ, ಬಿಜೆಪಿ 6 ವಾರ್ಡ್​ಗಳಲ್ಲಿ ಗೆದ್ದಿದೆ.

ಬೀದರ್ ನಗರಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರಕಿಲ್ಲ. 15 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಒಟ್ಟು 35 ಸ್ಥಾನಗಳ ಪೈಕಿ ಕಾಂಗ್ರೆಸ್ 15, ಬಿಜೆಪಿ 8, ಜೆಡಿಎಸ್ 7, ಎಐಎಂಐಎಂ 2 ಹಾಗೂ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಒಂದು ಸ್ಥಾನದಲ್ಲಿ ಜಯ ಗಳಿಸಿದ್ದಾರೆ. ಇನ್ನು ನ್ಯಾಯಾಲಯದ ಮೊರೆ ಹೋದ ಕಾರಣ ವಾರ್ಡ್ ಸಂಖ್ಯೆ 26 ಹಾಗೂ 32 ರ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದಿಲ್ಲ. ವಾರ್ಡ್ ಸಂಖ್ಯೆ 28ರ ಸದಸ್ಯ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದೆ.

ಮಡಿಕೇರಿ ನಗರಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ಸಾಧಿಸಿದೆ. ನಗರಸಭೆಯ ಒಟ್ಟು ಸ್ಥಾನ – 23 ಪೈಕಿ ಬಿಜೆಪಿ 16, ಎಸ್.ಡಿ.ಪಿ.ಐ -5, ಕಾಂಗ್ರೆಸ್ – 1 ಹಾಗೂ ಜೆಡಿಎಸ್ – 1 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ

Leave a Reply

Your email address will not be published. Required fields are marked *

error: Content is protected !!