ಸಂಸತ್ ಯೋಜನೆ ನಿಲ್ಲಿಸಿ – ಆಮ್ಲಜನಕ ಪೂರೈಸಿ ಟ್ವಿಟರ್ ಅಭಿಯಾನ ಪ್ರಾರಂಭ
ನವದೆಹಲಿ ಎ.29: ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ನಡುವೆ ಆರೋಗ್ಯ ಕ್ಷೇತ್ರ ಕುಸಿದು ಹೋಗಿದೆ. ಈ ನಡುವೆ ಕೇಂದ್ರ ಸರ್ಕಾರ ಸೆಂಟ್ರಲ್ ವಿಸ್ತಾ ಯೋಜನೆಯನ್ನು ಅಗತ್ಯ ಪಟ್ಟಿಗೆ ಸೇರಿಸಿ ನಿರ್ಮಾಣವನ್ನು ಮುಂದುವರೆಸಿದ್ದು ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇದೀಗ ಈ ಯೋಜನೆಯ ವಿರುದ್ಧ ಹ್ಯಾಶ್ ಟ್ಯಾಗ್ ಅಭಿಯಾನವೊಂದು ಆರಂಭಗೊಂಡಿದೆ.
ಕಟ್ಟಡಗಳಿಗಿಂತ ಮನುಷ್ಯ ಜೀವಗಳು ಅಮೂಲ್ಯ. ಸೆಂಟ್ರಲ್ ವಿಸ್ತಾ ನಿರ್ಮಾಣವನ್ನು ನಿಲ್ಲಿಸಿ, 20 ಸಾವಿರ ಕೋಟಿ ರೂ.ಗಳನ್ನು ಮನುಷ್ಯರ ಜೀವ ಉಳಿಸಲು ವಿನಿಯೋಗಿಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ #StopCentralVistaStartOxygen (ಸಂಸತ್ ಯೋಜನೆ ನಿಲ್ಲಿಸಿ, ಆಮ್ಲಜನಕ ಪೂರೈಸಿ) ಟ್ವಿಟರ್ ಅಭಿಯಾನವು ಪ್ರಾರಂಭಗೊಂಡಿದೆ.
ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ ಗೆ ತುತ್ತಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ನಿಯಂತ್ರಿಸುವುದು ಅಗತ್ಯವಾಗಿದೆ. ಸೆಂಟ್ರಲ್ ವಿಸ್ತಾ ಪ್ರಾಜೆಕ್ಟ್ ಹೊಸ ಸಂಸತ್ ಭವನ ಮತ್ತು ಇತರ ಕಟ್ಟಡಗಳನ್ನು ನಿರ್ಮಿಸುವ ದುಬಾರಿ ಯೋಜನೆಯಾಗಿದೆ.
ಆ ಪ್ರದೇಶದ ಪರಿಸರ, ಐತಿಹಾಸಿಕ ಕಟ್ಟಡಗಳನ್ನು ನೆಲಕ್ಕೆ ಉರುಳಿಸಿ ಈ ಯೋಜನೆ ಜಾರಿ ಮಾಡಲಾಗುತ್ತಿದೆ. ನಾವೆಲ್ಲರೂ ಇದನ್ನು ವಿರೋಧಿಸೋಣ. ಈ ಬಿಕ್ಕಟ್ಟಿನ ಸಮಯದಲ್ಲಿ ಯೋಜನೆಯ ಹಣದಲ್ಲಿ 20 ಸಾವಿರ ಕೋಟಿ ರೂ.ಗಳನ್ನು ಆರೋಗ್ಯ ಸೌಕರ್ಯ ವಿಸ್ತರಿಸಲು ಬಳಸಿ ಎಂದು ಆಗ್ರಹಿಸೋಣ ಎಂಬ ಬೇಡಿಕೆಯೊಂದಿಗೆ ಈ ಅಭಿಯಾನ ಆರಂಭಿಸಲಾಗಿದೆ.
ಕೋವಿಡ್ ಬಿಕ್ಕಟ್ಟು ತೀವ್ರವಾದ ಸಂದರ್ಭದಲ್ಲಿ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ತಾ ಯೋಜನೆಯ ಕೆಲಸಗಳನ್ನು ಮುಂದುವರೆಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಸೆಂಟ್ರಲ್ ವಿಸ್ತಾ- ಅನಿವಾರ್ಯವಲ್ಲ. ವಿಜನ್ ಹೊಂದಿರುವ ಕೇಂದ್ರ ಸರ್ಕಾರ ಅತ್ಯಗತ್ಯ” ಎಂದು ಬರೆದುಕೊಂಡಿದ್ದಾರೆ.