ಉಡುಪಿಯಲ್ಲೂ ಬೆಡ್’ಗಳ ಕೊರತೆಯ ಭೀತಿ, ಇಂದೂ ಕೂಡ ಲಸ್ಸಿಕೆಗೆ ಮುಗಿಬಿದ್ದ ಜನತೆ
ಉಡುಪಿ ಎ.29.(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನಹೋದಂತೆ ಹೆಚ್ಚಾಗುತ್ತಿದೆ. ಈ ನಡುವೆ ಜಿಲ್ಲೆಯಲ್ಲಿ ಬೆಡ್ ಗಳ ಲಭ್ಯತೆ ಕುರಿತಂತೆ ಭೀತಿ ಎದುರಾಗಿದೆ. ಇದಕ್ಕೆ ಕಾರಣ ಕಳೆದೆರಡು ದಿನಗಳ ಹಿಂದೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್ ಸೋಂಕಿತ ಮಹಿಳೆಯೊಬ್ಬರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಅವರ ಮನೆಯವರು ವೆಂಟಿಲೇಟರ್ ಗಾಗಿ ಉಡುಪಿ ಮಣಿಪಾಲದ ಹಲವು ಆಸ್ಪತ್ರೆಗಳನ್ನು ಸಂಪರ್ಕಿಸಿದ್ದರು. ಆದರೆ ಎಲ್ಲೂಕೂಡಾ ಬೆಡ್ ಗಳು ದೊರೆತಿಲ್ಲ ಎಂಬ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿದೆ. ಇದರಿಂದ ಜಿಲ್ಲೆಯಲ್ಲಿಯೂ ಇತರ ಕಡೆಗಳಂತೆ ಬೆಡ್ ಗಳ ಕೊರತೆ ಉಂಟಾಗಿದೆಯೇನೊ ಎಂಬ ಆತಂಕ ಶುರುವಾಗಿದೆ. ಆದರೆ, ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಡಳಿತ ಖಾಸಗಿ ಆಸ್ಪತ್ರೆಯಲ್ಲಿ ಸರಕಾರದ ಸೂಚನೆಯಂತೆ ಮೀಸಲಿಡಲಾದ ಬೆಡ್ ಗಳನ್ನು ಹೊರತು ಪಡಿಸಿ ಉಳಿದ ಬೆಡ್ ಗಳು ಭರ್ತಿಯಾಗಿದೆ. ಆದ್ದರಿಂದ ಕೊರೋನಾ ಸೋಂಕಿತರು ಬೆಡ್ ಗಳಿಗಾಗಿ ನೇರವಾಗಿ ಆಸ್ಪತ್ರೆಯನ್ನು ಸಂಪರ್ಕಿಸದೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಂಟ್ರೋಲ್ ರೂಂ ಸಂಪರ್ಕಿಸಿ ಆ ಮೂಲಕ ಹೋದರೆ ಮಾತ್ರ ಬೆಡ್ ದೊರೆಯುತ್ತದೆ ಎಂದು ತಿಳಿಸಿದೆ.
ಜಿಲ್ಲಾಸ್ಪತ್ರೆಯಲ್ಲಿರು ಕೋವಿಡ್ ಬೆಡ್ ಗಳ ಲಭ್ಯತೆ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಸರ್ಜನ್ ಮಧುಸೂದನ್ ಅವರು, ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ಗೆ ಸಂಬಂಧಿಸಿ ಒಟ್ಟು 60 ಬೆಡ್ಗಳಿದ್ದು, ಅದರಲ್ಲಿ 35 ಆಕ್ಸಿಜನ್ ಬೆಡ್ಗಳಿವೆ. ಸದ್ಯ 7-8 ಆಕ್ಸಿಜನ್ ಬೆಡ್ಗಳು ಭರ್ತಿಯಾಗಿದೆ. 10 ಐಸಿಯು ಬೆಡ್ನಲ್ಲಿರುವ ಇಬ್ಬರು ರೋಗಿಗಳ ಸ್ಥಿತಿ ಗಂಭೀರವಾಗಿದೆ. ಅವರಿಗೆ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ. ಸದ್ಯ ನಮ್ಮಲ್ಲಿ ಬೆಡ್ ಕೊರತೆ ಇಲ್ಲ’ ಎಂದಿದ್ದಾರೆ. ಇನ್ನು ಮಣಿಪಾಲ ಆಸ್ಪತ್ರೆಯಲ್ಲೂ ಸದ್ಯ ಬೆಡ್ಗಳ ಕೊರತೆ ಇಲ್ಲ ಎಂಬುದು ಅಲ್ಲಿನ ವೈದ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಬಾರದಿದ್ದರೆ ಸಮಸ್ಯೆ ಉಂಟಾಗಬಹುದು ಎಂಬ ಕಳವಳ ವ್ಯಕ್ತಪಡಿಸಿದ್ದಾರೆ.
ಮತ್ತೊಂಡೆ ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ ಪಡೆಯಲು ಬಂದವರಿಗೆ ಟೋಕನ್ ಸಿಗದೆ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣ ವಾಗಿತ್ತು ಕಳೆದ ಕೆಲ ದಿನಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ ಕೊರತೆ ಹಿನ್ನೆಲೆಯಲ್ಲಿ ಲಸಿಕೆ ನೀಡುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಲಸಿಕೆ ಪಡೆಯಲು ನೋಂದಾಯಿಸಿಕೊಂಡಿದ್ದ ಹಲವರು ಅಲೆದಾಟ ನಡೆಸಿದ್ದರು. ಈ ನಡುವೆ ಜಿಲ್ಲೆಗೆ 12,000 ಸಾವಿರ ಡೋಸ್ ಕೋವಿಶೀಲ್ಡ್ ಲಸಿಕೆ ಬಂದಿದ್ದು ಈ ಪೈಕಿ 200 ಡೋಸ್ ಗಳು ಜಿಲ್ಲಾಸ್ಪತ್ರೆಗೆ ನೀಡಲಾಗಿದೆ. ಆದ್ದರಿಂದ ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ ಪಡೆಯಲು ನೂರಾರು ಜನ ಬಂದಿದ್ದರು. ಆದರೆ 130 ಮಂದಿಗೆ ಮಾತ್ರ ಮಧ್ಯಾಹ್ನದವರೆಗೆ ಲಸಿಕೆ ನೀಡಿ, ಉಳಿದವರಿಗೆ ಟೋಕನ್ ನೀಡಿ ನಂತರ ಬರಲು ತಿಳಿಸಲಾಯಿತು.
ಇದರಿಂದ ಆಕ್ರೋಶ ಗೊಂಡ ಹಲವರು ಟೋಕನ್ ಪಡೆಯಲು ಗಲಾಟೆ ನಡೆಸಿದ್ದು ಸರಕಾರ ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಫೀವರ್ ಕ್ಲಿನಿಕ್ ನಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ಜಿಲ್ಲಾಧಿಕಾರಿ ನಿರ್ದೇಶನದಂತೆ ಫೀವರ್ ಕ್ಲಿನಿಕ್ನ್ನು ಸಮೀಪದಲ್ಲಿರುವ ಸೈಂಟ್ ಸಿಸಿಲಿ ಶಾಲೆಯ ಆವರಣಕ್ಕೆ ಸ್ಥಳಾಂತರಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
ಸದ್ಯ ಜಿಲ್ಲಾಸ್ಪತ್ರೆಯ ಫೀವರ್ ಕ್ಲೀನಿಕ್ ನಲ್ಲಿ ಪ್ರತಿದಿನ 200 ಮಂದಿಯ ಮಾತ್ರ ಗಂಟಲು ದ್ರವ ಸಂಗ್ರಹ ಮಾಡಲಾಗುತ್ತಿದ್ದು, ಇಬ್ಬರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಿಲ್ಲೆಯ ಸಮುದಾಯ ಕೇಂದ್ರಗಳಲ್ಲಿ ಗಂಟಲು ದ್ರವ ಸಂಗ್ರಹಕ್ಕೆ ಅವಕಾಶ ಇದ್ದರೂ ಜನ ಜಿಲ್ಲಾಸ್ಪತ್ರೆಗೆ ಬರುತ್ತಿರುವುದರಿಂದ ಸಮಸ್ಯೆಗಳಾಗುತ್ತಿವೆ ಎಂದು ಸರ್ಜನ್ ಡಾ.ಮಧುಸೂದನ್ ನಾಯಕ್ ಹೇಳಿದ್ದಾರೆ.