ಕೋರ್ಟ್ ನ ಮಹಿಳಾ ಸಿಬಂದಿಗೆ ಡಾಲರ್’ನ ಆಸೆ ತೋರಿಸಿ ರೂ. 10.14 ಲಕ್ಷ ವಂಚನೆ!

 ಬೆಂಗಳೂರು ಎ.28: ಹೈಕೋರ್ಟ್ ನ ಮಹಿಳಾ ಉದ್ಯೋಗಿಯೊಬ್ಬರಿಗೆ ಅಮೆರಿಕ ಡಾಲರ್ ನ ಆಸೆ ತೋರಿಸಿ ಲಕ್ಷಾಂತರ ರೂ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹಣ ಕಳೆದುಕೊಂಡ ತ್ಯಾಗರಾಜನಗರ ಸಮೀಪ ನೆಲೆಸಿರುವ 32 ವರ್ಷದ ಮಹಿಳೆ, ಅಹಮ್ಮದ್ ಅಲಿ ಎಂಬಾತನ ವಿರುದ್ಧ ದೂರು ನೀಡಿದ್ದಾರೆ. ಕೆಲ ದಿನಗಳ ಹಿಂದೆ ಮಹಿಳೆಗೆ ಮ್ಯಾಟ್ರಿಮೋನಿಯಲ್ ತಾಣದಲ್ಲಿ ಅಹಮದ್ ಅಲಿ ಪರಿಚಯವಾಗಿದ್ದ. ಈ ಪರಿಚಯ ಗೆಳೆತನಕ್ಕೆ ತಿರುಗಿದೆ, ಈ ನಡುವೆ ಈತ ಅಮೆರಿಕದ ಡಾಲರ್ಸ್ ಕಳುಹಿಸುತ್ತೇನೆ. ಬ್ಯಾಂಕ್ ಖಾತೆಗೆ ಡಾಲರ್ಸ್ ವರ್ಗಾವಣೆ ಪ್ರಕ್ರಿಯೆಗೆ ಕೆಲವು ಶುಲ್ಕಗಳನ್ನು ಭರಿಸಬೇಕಿದೆ ಎಂದಿದ್ದಾನೆ.

ಈ ಮಾತು ನಂಬಿದ ಆಕೆ, ಆರೋಪಿ ಖಾತೆಗೆ ಹಂತ ಹಂತವಾಗಿ 10.14 ಲಕ್ಷ ಜಮೆ ಮಾಡಿದ್ದಾರೆ. ಹೀಗೆ ಹಣ ಸಂದಾಯವಾದ ಬಳಿಕ ಆತ ಸಂಪರ್ಕ ಕಡಿತಗೊಳಿಸಿದ್ದಾನೆ. ಕೊನೆಗೆ ಮಹಿಳೆಗೆ ತಾನು ಮೋಸ ಹೋಗಿರುವುದು ಅರಿವಾಗಿದೆ. ಬಳಿಕ ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಕುರಿತ ಮಾಹಿತಿ ಆಧರಿಸಿ ಆರೋಪಿ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ದಕ್ಷಿಣ ವಿಭಾಗದ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!