ಶೇ.50 ರಷ್ಟು ಕಾರ್ಮಿಕರ ಬಳಸಿ ಗಾರ್ಮೆಂಟ್ಸ್ ತೆರೆಯಲು ಸರ್ಕಾರ ಅನುಮತಿ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಲಾಕ್‌ಡೌನ್ ಘೋಷಣೆ ಹಿನ್ನೆಲೆಯಲ್ಲಿ ಗಾರ್ಮೆಂಟ್ಸ್ ಫ್ಯಾಕ್ಟರಿಗಳಿಗೆ ಹೇರಿದ್ದ ಸಂಪೂರ್ಣ ನಿರ್ಬಂಧವನ್ನು ರಾಜ್ಯ ಸರ್ಕಾರ ಬುಧವಾರ ಸಡಿಲಗೊಳಿಸಿದ್ದು, ಶೇ 50 ರಷ್ಟು ಕಾರ್ಮಿಕರನ್ನು ಬಳಸಿಕೊಂಡು ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಿದೆ.

ಕೊರೋನಾ ಲಾಕ್‌ಡೌನ್ ಮಾರ್ಗಸೂಚಿಯಲ್ಲಿ ಉಳಿದ ಕಾರ್ಖಾನೆಗಳಿಗೆ ಕೊರೋನಾ ನಿಯಮ ಪಾಲಿಸಿ ಶೇ. 50 ರಷ್ಟು ಕಾರ್ಮಿಕರನ್ನು ಬಳಸಿಕೊಂಡು ಉತ್ಪಾದನಾ ಚಟುವಟಿಕೆ ನಡೆಸಲು ಅವಕಾಶ ಕಲ್ಪಿಸಿದ್ದ ರಾಜ್ಯ ಸರ್ಕಾರ ಗಾರ್ಮೆಂಟ್ ಫ್ಯಾಕ್ಟರಿಗಳನ್ನು ಸಂಪೂರ್ಣವಾಗಿ ಬಂದ್ ಮಾಡುವಂತೆ ಆದೇಶ ಮಾಡಿತ್ತು. 

ಇದರಿಂದ ಅಸಮಧಾನಗೊಂಡಿದ್ದ ಗಾರ್ಮೆಂಟ್ ಫ್ಯಾಕ್ಟರಿ ಅಸೋಷಿಯೇಷನ್ ವತಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದು, ಸಂಪೂರ್ಣ ಬಂದ್ ಮಾಡುವುದರಿಂದ ಗಾರ್ಮೆಂಟ್ ಉದ್ಯಮ ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ. ಅಲ್ಲದೇ ಇಲ್ಲಿನ ಉದ್ಯೋಗಿಗಳ ಜೀವನ ನಿರ್ವಹಣೆ ಕಷ್ಟವಾಗಲಿದೆ. ಹೀಗಾಗಿ ಶೇ 50 ರಷ್ಟು ಕಾರ್ಮಿಕರನ್ನು ಬಳಸಿಕೊಂಡು ಚಟುವಟಿಕೆ ನಡೆಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದರು. ಅವರ ಮನವಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶೇ. 50 ರಷ್ಟು ಕಾರ್ಮಿಕರನ್ನು ಬಳಸಿಕೊಂಡು ಕೊರೋನಾ ನಿಯಮವನ್ನು ಪಾಲಿಸಿ ಗಾರ್ಮೆಂಟ್ ಚಟುವಟಿಕೆ ನಡೆಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಗಾರ್ಮೆಂಟ್ ಕೆಲಸಕ್ಕೆ ಹಾಜರಾಗುವ ಕಾರ್ಮಿಕರಿಗೆ ಸಂಬಂಧಪಟ್ಟ ಫ್ಯಾಕ್ಟರಿಯಿಂದ ಪಾಸ್ ನೀಡುವಂತೆ ಸೂಚಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!