ಕೋವಿಡ್-19 ಕರಾಳತೆ: ದೆಹಲಿ ಸ್ಮಶಾನಗಳಲ್ಲಿ ಅಂತಿಮ ಸಂಸ್ಕಾರಕ್ಕಾಗಿ 20 ಗಂಟೆ ಕ್ಯೂ!
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ನಿಂದ ಮೃತಪಟ್ಟ 50 ಮಂದಿಯನ್ನು ಮೈದಾನವನ್ನೇ ಸ್ಮಶಾನವಾಗಿ ಪರಿವರ್ತಿಸಿ, ಎತ್ತರದ ಕಟ್ಟಿಗೆಯ ಛಾವಣಿ ಮೇಲಿಟ್ಟು ಮಂಗಳವಾರ ಸಾಮೂಹಿಕವಾಗಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಒಂದು ಕಡೆ ಬೆಂಕಿಯಿಂದ ಚಿತೆ ಉರಿಯುತ್ತಿದ್ದರೆ ಮತ್ತೊಂದೆಡೆ ಕೆಳಗಡೆ ಒಂದಿಷ್ಟು ಶವಗಳನ್ನು ಮಲಗಿಸಲಾಗಿತ್ತು. ಶವ ಸಂಸ್ಕಾರ ಮಾಡಲು 16 ರಿಂದ 20 ಗಂಟೆಗಳ ಕಾಲ ಕ್ಯೂನಲ್ಲಿ ನಿಂತಿರುವುದಾಗಿ ಸಂಬಂಧಿಕರು ತಮ್ಮ ಗೋಳನ್ನು ಹೇಳುತ್ತಿದ್ದರು.
ದೆಹಲಿ ಊಹಿಸಲಾಗದಂತಹ ದುರಂತಕ್ಕೆ ಸಿಲುಕಿ ತನ್ನ ಚೈತ್ಯನ್ಯವನ್ನು ಕಳೆದುಕೊಂಡಂತಾಗಿದ್ದು, ಸ್ಮಶಾನಗಳಲ್ಲಿ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಜಾಗವಿಲ್ಲದಂತಾಗಿದೆ. ಒಂದೇ ಸಮಯಕ್ಕೆ ಬರುವ ಹೆಚ್ಚಿನ ಶವಗಳಿಂದಾಗಿ ಶವಾಗಾರಗಳ ಸಿಬ್ಬಂದಿ ಹೈರಾಣಾಗಿದ್ದಾರೆ.
ನನ್ನ ಜೀವನದಲ್ಲಿಯೇ ಇಂತಹ ಕೆಟ್ಟ ಪರಿಸ್ಥಿತಿಯನ್ನು ನೋಡಿರಲಿಲ್ಲ. ದೆಹಲಿಯ ಎಲ್ಲಾ ಸ್ಮಶಾನಗಳು ಮೃತದೇಹಗಳಿಂದ ತುಂಬಿ ಹೋಗಿರುವುದಾಗಿ ಮಾಸ್ಸಿ ಚಿತಾರಾಗದ ಮಾಲೀಕ ವಿನೀತಾ ಮಾಸ್ಸಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಅಧಿಕೃತ ಮಾಹಿತಿಗಳ ಪ್ರಕಾರ ಈ ತಿಂಗಳಲ್ಲಿ 3,601 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 2,267 ಜನರು ಕಳೆದ ಒಂದು ವಾರದಿಂದೀಚೆಗೆ ಸಾವನ್ನಪ್ಪಿದ್ದಾರೆ. ಫೆಬ್ರವರಿಯಲ್ಲಿ 57, ಮಾರ್ಚ್ ನಲ್ಲಿ 117 ಮಂದಿ ಸಾವನ್ನಪ್ಪಿದ್ದರು.