ರಸ್ತೆ ಬದಿ ಕಸ ಸುರಿದು ಹೋದ ಸ್ವಚ್ಛತಾ ಸಿಬಂದಿಗಳು- ಅಲೆವೂರು ಪಂಚಾಯತ್ ಅಧ್ಯಕ್ಷರಿಂದ ಎಚ್ಚರಿಕೆ
ಉಡುಪಿ ಎ.26 (ಉಡುಪಿ ಟೈಮ್ಸ್ ವರದಿ): ನಗರ ಸಭೆಯ ಕಸ ವಿಲೇವಾರಿ ವಿಚಾರವಾಗಿ ಅನೇಕ ಕಡೆಗಳಿಂದ ಅಸಮಾಧಾನದ ಮಾತುಗಳು ಕೇಳಿ ಬರುತ್ತಿದ್ದವು. ಅನೇಕ ಕಡೆಗಳಲ್ಲಿ ಅಲ್ಲಲ್ಲೇ ತ್ಯಾಜ್ಯಗಳನ್ನು ಎಸೆದು ಹೋಗುತ್ತಾರೆ ಎಂಬ ಆರೋಪದ ಮಾತುಗಳು ಈಗಾಗಲೇ ಅನೇಕ ಬಾರಿ ಕೇಳಿದ್ದೇವೆ.
ಇದೇ ರೀತಿ ಇಂದು ಕರ್ವಾಲ್ ತ್ಯಾಜ್ಯ ಘಟಕಕ್ಕೆ ಕಸ ವಿಲೆವಾರಿ ಮಾಡುವ ರಿಕ್ಷಾ ಟೆಂಪೋವೊಂದು ಸಾಮರ್ಥ್ಯಕ್ಕಿಂತ ಹೆಚ್ಚು ಕಸವನ್ನ ತುಂಬಿಕೊಂಡು ಹತ್ತಲಿಕ್ಕೆ ಆಗದೆ ಅಲೆವೂರು ಸಿದ್ಧಾರ್ಥ ನಗರದಲ್ಲಿ ಸಾರ್ವಜನಿಕ ಮುಖ್ಯ ರಸ್ತೆಯಲ್ಲಿ ಹಾಕಿದ್ದರು.
ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಪಂಚಾಯತ್ ಅಧ್ಯಕ್ಷೆ ಪುಷ್ಪ ಅಂಚನ್ ಹಾಗೂ ಸದಸ್ಯರಾದ ಜಲೇಶ್ ಶೆಟ್ಟಿ ಸ್ಥಳಕ್ಕೆ ಧಾವಿಸಿ ಅಲ್ಲಿಂದ ಕಸವನ್ನು ತೆರವುಗೊಳಿಸಿದರು. ಇದೀಗ ಪಂಚಾಯತ್ ಅಧ್ಯಕ್ಷರ ತ್ಯಾಜ್ಯ ವಿಲೇವಾರಿ ಮಾಡಿಸುವ ಕೆಲಸ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನಗರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳು ಕ್ರಮ ಕೈಗೊಳ್ಳುವಂತಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.