ಕೋವಿಡ್- 19 ಬಾಧಿತರ ಕಷ್ಟಕ್ಕೆ ಸ್ಪಂದಿಸುವುದು ಕಾಂಗ್ರೆಸ್’ನ ಕರ್ತವ್ಯ: ಅಶೋಕ್ ಕೊಡವೂರು

ಉಡುಪಿ ಎ.26 (ಉಡುಪಿ ಟೈಮ್ಸ್ ವರದಿ): ಕೋವಿಡ್ 19 ಬಾಧಿತರ ಕಷ್ಟಕ್ಕೆ ಸ್ಪಂದಿಸುವುದು ಕಾಂಗ್ರೆಸ್ ಕರ್ತವ್ಯವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ. ಇಂದು ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ “ಕೋವಿಡ್ -19 ನಿರ್ವಹಣೆ” ತುರ್ತು ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್-19 ಭಾದಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲಿದ್ದು ಮರಣ ಪ್ರಮಾಣವೂ  ಹೆಚ್ಚಾಗುತ್ತಿದೆ. ಒಂದು ರಾಷ್ಟ್ರೀಯ ಪಕ್ಷದ ನೆಲೆಯಲ್ಲಿ ಜನರ ದು:ಖ ದುಮ್ಮಾನಗಳಿಗೆ ಸ್ಪಂದಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು ನಮ್ಮ ಕರ್ತವ್ಯವಾಗಿದೆ.

ಈ ನಿಟ್ಟನಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಜನಪರ ಕಾರ್ಯ ಯೋಜನೆಯೊಂದನ್ನು ಹಮ್ಮಿಕೊಳ್ಳಲಿದೆ.  ಜಿಲ್ಲೆಯು ಗ್ರಾಮೀಣ ಪರಿಸರವನ್ನು ಹೊಂದಿದ್ದು ರೋಗಿಗಳನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸುವ ನಿಟ್ಟಿನಲ್ಲಿ ರೆಮ್ಡಿಸಿವಿರ್ ಮಾತ್ರೆಗಳ ಪೂರೈಕೆ, ವೇಕ್ಸಿನೇಶನ್ ಬಗ್ಗೆ ಜನರಿಗೆ ಸೂಕ್ತ ಸಕಾಲೀಕ ಮಾಹಿತಿ, ಅವಶ್ಯಕತೆಗೆ ಅನುಗುಣವಾಗಿ ರಕ್ತ ಮತ್ತು ಪ್ಲಾಸ್ಮಾ ನೀಡಿಕೆಯೇ ಮೊದಲಾದ ವ್ಯವಸ್ತೆಯ ಬಗ್ಗೆ ಪಕ್ಷವು ತನ್ನದ್ದೇ ಆದ ಕೋರೋನಾ ವಾರಿಯರ್ಸ್ ಗಳನ್ನು ನೇಮಿಸಿ ಕ್ರಮ ಕೈಗೊಳ್ಳಲಿದೆ. ಹಾಗೆಯೇ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರ ಸೂಚನೆಯಂತೆ ಹೆಲ್ಪ್ ಲೈನ್ ವ್ಯವಸ್ಥೆಯನ್ನು ಜಿಲ್ಲಾ ಕಾಂಗ್ರೆಸ್ ವತಿಯಿಂದ ಆದಷ್ಟು ಶೀಘ್ರದಲ್ಲಿ ಮಾಡಲಾಗುವುದು ಎಂದು ಹೇಳಿದರು.

ಸಭೆಯಲ್ಲಿ, ಒಮ್ಮೆ ವ್ಯಾಕ್ಸಿನ್ ಹಾಕಿಸಿಕೊಂಡವರು ಎರಡನೇ ಬಾರಿಗೆ ವ್ಯಾಕ್ಸಿನ್‍ಗೆ ಬರಲು ಆರೋಗ್ಯ ಸೇತು ಆ್ಯಪ್‍ನಲ್ಲಿ ದಿನಾಂಕ ಸೂಚಿಸಿದ್ದರೂ ಸೆಂಟರಿನಲ್ಲಿ ವ್ಯಾಕ್ಸಿನ್ ಲಭ್ಯ ಇಲ್ಲದಿರುವುದು ಗಮನಕ್ಕೆ ಬಂದಿರುತ್ತದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಬೇಕು, ಕುಂದಾಪುರದಲ್ಲಿ 120 ರೋಗಿಗಳಿಗೆ ಒಬ್ಬರೇ ವೈದ್ಯರು ಲಭ್ಯವಿದ್ದು ಈ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆಯ ಬೇಕು. ಕೆಲವು ಆಸ್ಪತ್ರೆಗಳಲ್ಲಿ ಬೆಡ್ ಇದ್ದರೂ ಇಲ್ಲ ಎಂದು ರೋಗಿಗಳನ್ನು ಹಿಂದೆ ಕಳುಹಿಸುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರ ಗಮನಕ್ಕೆ ತರಬೇಕು ಎಂಬ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ಈ ಸಂದರ್ಭದಲ್ಲಿ ಡಾ| ಸಂದೀಪ್ ಸನಿಲ್, ವೆರೋನಿಕಾ ಕರ್ನೇಲಿಯೋ, ಉದ್ಯಾವರ ನಾಗೇಶ್ ಕುಮಾರ್, ಡಾ. ಸುನೀತಾ ಶೆಟ್ಟಿ, ಹರೀಶ ಶೆಟ್ಟಿ ಪಾಂಗಾಳ, ರಮೇಶ ಕಾಂಚನ್, ಕೃಷ್ಣಮೂರ್ತಿ ಅಚಾರ್ಯ, ಸೌರಭ್ ಬಲ್ಲಾಳ್, ದೀಪಕ್ ಕೋಟ್ಯಾನ್, ಬಾಲಕೃಷ್ಣ ಪೂಜಾರಿ, ರೋಶನಿ ಒಲಿವೇರಾ, ಚಂದ್ರಶೇಖರ ಶೆಟ್ಟಿ ವೊದಲಾದವರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಸಂಕಪ್ಪ ಎ, ವಿಘ್ನೇಶ್ ಕಿಣಿ, ಚಂದ್ರಾವತಿ ಭಂಡಾರಿ, ಅಖಿಲೇಶ್, ರೋಶನ್ ಶೆಟ್ಟಿ, ಪ್ರಕಾಶ್, ಶೇಖರ್ ಕೆ. ಕೋಟ್ಯಾನ್, ಡೆರಿಕ್ ಡಿಸೋಜಾ, ಸಂಜಯ್ ಆಚಾರ್ಯ, ಜಿಲ್ಲಾ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಕಾರ್ಯದರ್ಶಿ ಕೀರ್ತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!