ಆರೋಗ್ಯ ವಲಯ ತಲ್ಲಣ: ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳ- ಐಸಿಯುಗೆ ದಾಖಲಾಗುವ ಸಂಖ್ಯೆಯೂ ಏರಿಕೆ!

ಬೆಂಗಳೂರು: ಕೋವಿಡ್‌ ಎರಡನೇ ಅಲೆ ಸೃಷ್ಟಿಸಿರುವ ಬಿಕ್ಕಟ್ಟಿನಿಂದ ಆರೋಗ್ಯ ವಲಯ ತಲ್ಲಣಗೊಂಡಿದೆ. ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ತೀವ್ರ ನಿಗಾ ಘಟಕ (ಐಸಿಯು) ಸೇರುವವರ ಸಂಖ್ಯೆಯೂ ಏರಿಕೆಯಾಗಿದೆ. ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗಾಗಿ ಅಲೆದಾಟ, ಸಿಗದ ಬೆಡ್‌, ಆಕ್ಸಿಜನ್‌ ಹಾಸಿಗೆ, ಐಸಿಯು ಕೊರತೆ ಪರಿಸ್ಥಿತಿಯನ್ನು ಬಿಗಡಾಯಿಸಿದೆ.‌

ಸೋಂಕಿತರಿಗೆ ಹಂಚಿಕೆ ಮಾಡಲು ಶೇಕಡ 50 ರಷ್ಟು ಹಾಸಿಗೆಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕೆಂಬ ಆದೇಶ ಪಾಲಿಸದ ಖಾಸಗಿ ಆಸ್ಪತ್ರೆಗಳು, ಹಾಸಿಗೆ ಹಂಚಿಕೆಯಾದ ಆಸ್ಪತ್ರೆಗೆ ತೆರಳಿದರೆ ಖಾಲಿ ಇಲ್ಲವೆಂಬ ಉತ್ತರ, ಇದರ ನಡುವೆ ಜೀವ ಉಳಿಸಿಕೊಳ್ಳಬೇಕೆಂದು ರೋಗಿ ಸಹಿತ ಆಸ್ಪತ್ರೆಗಳಿಗೆ ಸುತ್ತಾಡುವ ಸಂಬಂಧಿಕರ ಪಡಿಪಾಟಲು ಮುಂದುವರಿದಿದೆ. ಹಣ ಕೊಟ್ಟರೂ ಹಾಸಿಗೆ ಸಿಗದ ಪರಿಸ್ಥಿತಿ ಉಂಟಾಗಿದೆ.‌

ಈ ಮಧ್ಯೆ, ಕೊರತೆ ತುಂಬಲು, ಶೇಕಡ 75ರಷ್ಟು ಹಾಸಿಗೆಗಳನ್ನು ಖಾಸಗಿ ಅಸ್ಪತ್ರೆಗಳು ಬಿಟ್ಟುಕೊಡಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಅದನ್ನು ಒಪ್ಪಲು ತಯಾರಿಲ್ಲದ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಂ ಅಸೋಸಿಯೇಷನ್‌ (ಫನಾ), ‘ಖಾಸಗಿ ಆಸ್ಪತ್ರೆಗಳನ್ನೆಲ್ಲ ಸರ್ಕಾರವೇ ನಡೆಸಲಿ’ ಎಂದು ಸವಾಲೊಡ್ಡಿದೆ. ಇದು ಸರ್ಕಾರ– ಖಾಸಗಿ ಆಸ್ಪತ್ರೆಗಳ ನಡುವೆ ಗುದ್ದಾಟಕ್ಕೆ ಕಾರಣವಾಗುವ ಸಾಧ್ಯತೆ ಇದೆ.

‘ಸರ್ಕಾರದಿಂದ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕು ಪೀಡಿತರಿಗೆ ಹಂಚಿಕೆಯಾದ ಬೆಡ್‌ಗಳು ಖಾಲಿ ಇಲ್ಲ. ಅಷ್ಟರಮಟ್ಟಿಗೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಯಾವ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ ಖಾಲಿ ಇದೆ ಎಂಬ ಮಾಹಿತಿ ಸಿಗದೇ ರೋಗಿಗಳು, ಕುಟುಂಬ ಸದಸ್ಯರ ಜೊತೆ  ಅಲೆದಾಡುತ್ತಿದ್ದಾರೆ. ಹೀಗಾಗಿ, ನಮ್ಮಲ್ಲಿ ಲಭ್ಯವಿರುವ ಹಾಸಿಗೆಗಳ ಮಾಹಿತಿಗಾಗಿ ವೆಬ್‌ ಪೋರ್ಟಲ್‌ ಆರಂಭಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಶೇಕಡ 75ರಷ್ಟು ಹಾಸಿಗೆಗಳನ್ನು ಬಿಟ್ಟುಕೊಡಬೇಕೆಂಬ ಸರ್ಕಾರದ ಆದೇಶ ವಿರುದ್ಧ, ಎಲ್ಲ ಆಸ್ಪತ್ರೆ
ಗಳನ್ನು ಸರ್ಕಾರಕ್ಕೇ ಬಿಟ್ಟುಕೊಡುವ ಬಗ್ಗೆ ಸದಸ್ಯರಿಂದ ಸಹಿ ಅಭಿಯಾನ ಮಾಡುತ್ತೇವೆ’ ಎಂದು ಫನಾ ಅಧ್ಯಕ್ಷ ಡಾ. ಪ್ರಸನ್ನ ಎಚ್‌.ಎಂ. ಆಕ್ರೋಶ ವ್ಯಕ್ತಪಡಿಸಿದರು.

‘ಸಾಮಾನ್ಯ ಬೆಡ್‌ಗೆ ₹ 10 ಸಾವಿರ ಖರ್ಚು ಬರುತ್ತದೆ. ಕಳೆದ ಬಾರಿ ಶೇ 50 ಹಾಸಿಗೆಗಳನ್ನು ಶೇ 50 ರಷ್ಟು ಮೊತ್ತಕ್ಕೆ ಬಿಟ್ಟುಕೊಟ್ಟಿದ್ದೇವೆ. ಅದರಲ್ಲೂ ಸರ್ಕಾರದಿಂದ ಬಾಕಿ ಬರಬೇಕಿದೆ. ಶೇ 75ರಷ್ಟು ಬೆಡ್‌ಗಳನ್ನು ಬಿಟ್ಟುಕೊಟ್ಟರೆ, ಉಳಿದ ರೋಗಿಗಳಿಗೆ ಮತ್ತು ನಮ್ಮ ಸಿಬ್ಬಂದಿ ಅನಾರೋಗ್ಯಕ್ಕೀಡಾದರೆ ಹೊಂದಿಸುವುದು ಹೇಗೆ? ಅಷ್ಟೇ ಅಲ್ಲ, ಖಾಸಗಿ ಆಸ್ಪತ್ರೆಗಳಿಗೆ ರೆಮ್‌ಡಿಸಿವಿರ್‌ ಕೊಡಲ್ಲ. ಆಕ್ಸಿಜನ್‌ ಪೂರೈಕೆ ಮಾಡಲ್ಲ. ಕೋಟಿ, ಕೋಟಿ ಸಾಲ ಮಾಡಿ ಆಸ್ಪತ್ರೆ ಸ್ಥಾಪಿಸಿದ ನಮ್ಮ ಸಂಕಷ್ಟ ಯಾರಲ್ಲಿ ಹೇಳಿಕೊಳ್ಳಬೇಕು’ ಎಂದು ಪ್ರಶ್ನಿಸಿದರು.

‘ಹಾಸಿಗೆಗಳ ಕೊರತೆ ಇರುವುದು ನಿಜ. ಪರ್ಯಾಯ ವ್ಯವಸ್ಥೆಯ ಬಗ್ಗೆ ಸಲಹೆ ಕೊಡುವ ಸ್ಥಿತಿಯಲ್ಲಿ ನಾವು ಇಲ್ಲ. ಸರ್ಕಾರ ತೋಚಿದಂತೆ ಮಾಡುತ್ತಿದೆ. ನಮ್ಮ ಕೈಯಲ್ಲಿ ಸಾಧ್ಯವಿರುವುದನ್ನು ನಾವು ಮಾಡುತ್ತಿದ್ದೇವೆ. ತಾಂತ್ರಿಕ ಸಲಹಾ ಸಮಿತಿಯ ಸಲಹೆಯನ್ನೂ ಸರ್ಕಾರ ತೆಗೆದುಕೊಳ್ಳುವುದಿಲ್ಲ. ರಾಜಕೀಯ ವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದೆ. ಅವು ವೈಜ್ಞಾನಿಕವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

10 ದಿನಗಳಲ್ಲಿ ಮೂರು ಪಟ್ಟು!: ಬೆಂಗಳೂರಿನ ಸರ್ಕಾರಿ– ಖಾಸಗಿ ಆಸ್ಪತ್ರೆಗಳಲ್ಲಿರುವ ಐಸಿಯು ಹಾಗೂ ವೆಂಟಿಲೇಟರ್‌ಗಳು ಭರ್ತಿ ಆಗಿವೆ. ಕಳೆದೊಂದು ವಾರದಿಂದ ಐಸಿಯುಗೆ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಏರಿಕೆಯಾಗುತ್ತಲೇ ಇದೆ. ಕೇವಲ 10 ದಿನದಲ್ಲಿ ಐಸಿಯುಗೆ ದಾಖಲಾಗಿರುವ ಸೋಂಕಿತರ ಸಂಖ್ಯೆ ಮೂರು ಪಟ್ಟು ಆಗಿದೆ.

‘ಆಕ್ಸಿಜನ್‌ ಹಾಸಿಗೆಗಳ ಸಂಖ್ಯೆ ತಕ್ಷಣ ಹೆಚ್ಚಿಸಬೇಕು’
‘ಆಕ್ಸಿಜನ್‌ ಪೂರೈಸುವ ಜೊತೆಗೆ ಆಕ್ಸಿಜನ್‌ ಹಾಸಿಗೆಗಳ ಸಂಖ್ಯೆಯನ್ನು ಸರ್ಕಾರ ಹೆಚ್ಚಿಸಬೇಕು. ವಿಕ್ಟೋರಿಯಾ, ಬೌರಿಂಗ್‌ ಹೀಗೆ ಆಸ್ಪತ್ರೆಗಳ ಅಂಗಳದಲ್ಲಿಯೇ 50, 100 ಬೆಡ್‌ಗಳ ತಾತ್ಕಾಲಿಕ ವ್ಯವಸ್ಥೆ ಮಾಡಬೇಕು. ಈ ಕೆಲಸ ಆದಷ್ಟು ಬೇಗ ಆಗಬೇಕು. ಆಕ್ಸಿಜನ್‌ ಬೆಡ್‌ ಸಿಗುತ್ತಿಲ್ಲ ಎಂಬ ಅಪವಾದ ಇದರಿಂದ ತಪ್ಪುತ್ತದೆ’ ಎಂದು ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್. ಸಚ್ಚಿದಾನಂದ ಸಲಹೆ ನೀಡಿದರು.

‘ಸದ್ಯ ಎಲ್ಲ ಬೆಡ್‌ಗಳು ಭರ್ತಿಯಾಗಿವೆ. ಅದಕ್ಕೆ ಕಾರಣ, ಒಮ್ಮೆ ಆಸ್ಪತ್ರೆಗೆ ದಾಖಲಾದವರು ಕನಿಷ್ಠ 7 ರಿಂದ 10 ದಿನ ಇರಬೇಕಾಗುತ್ತದೆ. ನಿತ್ಯ 20 ಸಾವಿರದಿಂದ 25 ಸಾವಿರ ಕೇಸುಗಳು ಬರುತ್ತಿವೆ. ಅದರಲ್ಲಿ ಶೇ 80ರಷ್ಟು ಮಂದಿ ಮನೆಯಲ್ಲೇ ಆರೈಕೆ ಪಡೆದರೂ, ಉಳಿದವರಿಗೆ ಬೆಡ್‌ ವ್ಯವಸ್ಥೆ ಮಾಡಲೇಬೇಕು. ಎಲ್ಲೋ ಮಾಡುವ ಬದಲು, ಆಸ್ಪತ್ರೆಗಳ ಆವರಣದಲ್ಲಿಯೇ ಆಕ್ಸಿಜನ್‌ ಬೆಡ್‌ ಮಾಡಬೇಕು’ ಎಂದರು.

‘ಮುಂದಿನ ಎರಡು ವಾರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು. ಬಿಗಿ ಕ್ರಮಗಳಿಂದ ಸೋಂಕು ಹರಡುವಿಕೆಗೆ ತಡೆ ಬಿದ್ದರೂ, ರೋಗಲಕ್ಷಣ ಇಲ್ಲದವರಿಂದ ತಗಲಿದ್ದರೆ, ಆ ಸೋಂಕು ದೃಢವಾಗಲು 14 ದಿನ ತೆಗೆದುಕೊಳ್ಳುತ್ತದೆ. ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ. ಎರಡು ವಾರದಲ್ಲಿ ಅಲ್ಲಿ ಕಡಿಮೆಯಾದರೆ ಇಲ್ಲೂ ಆ ಸ್ಥಿತಿ ಬರಬಹುದು’ ಎಂದೂ ಹೇಳಿದರು.

ಖಾಸಗಿ ಆಸ್ಪತ್ರೆಗಳಲ್ಲಿರುವ ಹಾಸಿಗೆಗಳ ಪೈಕಿ ಶೇ 75ರಷ್ಟನ್ನು ಕೋವಿಡ್‌ ರೋಗಿಗಳಿಗೆ ಮೀಸಲಿಡಲು ನಿರ್ಧರಿಸಲಾಗಿದೆ. ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.
-ಡಾ.ಕೆ. ಸುಧಾಕರ್‌, ಆರೋಗ್ಯ ಸಚಿವ

ಶೇಕಡ 75ರಷ್ಟು ಹಾಸಿಗೆಗಳನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ಅದರ ಬದಲು,ಅವರೇ (ಸರ್ಕಾರ) ನಮ್ಮ ಆಸ್ಪತ್ರೆಗಳನ್ನೂ ನಡೆಸಲಿ, ಬಿಟ್ಟುಕೊಡುತ್ತೇವೆ.
-ಡಾ. ಪ್ರಸನ್ನ ಎಚ್‌.ಎಂ., ಅಧ್ಯಕ್ಷ, ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಂ ಅಸೋಸಿಯೇಷನ್‌

Leave a Reply

Your email address will not be published. Required fields are marked *

error: Content is protected !!