ಉಚಿತ ಪಡಿತರ ನೀಡಿದರೆ ಕಾರ್ಮಿಕರು ಕೆಲಸಕ್ಕೆ ಬರದೆ ಮನೆಯಲ್ಲೇ ಉಳಿಯುತ್ತಾರೆ: ಸಂಕೇಶ್ವರ
ಹುಬ್ಬಳ್ಳಿ: ‘ಕೇಂದ್ರ ಸರ್ಕಾರ ದೇಶದ ಜನತೆಗೆ ಉಚಿತ ಪಡಿತರ ವ್ಯವಸ್ಥೆ ಮಾಡಿರುವುದು ಸರಿಯಲ್ಲ. ಇದು ದೇಶಕ್ಕೆ ಗಂಡಾಂತರವಾಗಿದ್ದು, ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರಲಿದೆ’ ಎಂದು ಉದ್ಯಮಿ ವಿಜಯ ಸಂಕೇಶ್ವರ ಅಸಮಾಧಾನ ವ್ಯಕ್ತಪಡಿಸಿದರು.
‘ಕೇಂದ್ರ ಸರ್ಕಾರ ಪದೇ ಪದೇ ತಪ್ಪು ಮಾಡುತ್ತಿದೆ. ಕೊರೊನಾ ಮೊದಲ ಅಲೆಯ ಲಾಕ್‌ಡೌನ್ ಸಂದರ್ಭ ಹಾಗೂ ನಂತರದ ಮೂರು ತಿಂಗಳು ಬಡವರಿಗೆ ಉಚಿತ ಪಡಿತರ ನೀಡಿತ್ತು. ಎರಡನೇ ಅಲೆ ಎದ್ದಿರುವ ಈ ಸಂದರ್ಭದಲ್ಲೂ ದೇಶದ 80 ಕೋಟಿ ಮಂದಿಗೆ ಉಚಿತ ಪಡಿತರ ನೀಡಲು ನಿರ್ಧರಿಸಿದೆ. ಇದರಿಂದ ಕಾರ್ಮಿಕರು ಕೆಲಸಕ್ಕೆ ಬರದೆ ಮನೆಯಲ್ಲೇ ಉಳಿಯುತ್ತಾರೆ. ಇದು ಕೈಗಾರಿಕಾ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಜನರಿಗೆ ಮಾಡಲು ಸಾಕಷ್ಟು ಕೆಲಸಗಳಿವೆ. ಆದರೆ, ಉಚಿತ ಪಡಿತರ ವ್ಯವಸ್ಥೆಯಿಂದಾಗಿ ಅವರು ಕಾರ್ಯಕ್ಷೇತ್ರಗಳನ್ನು ಬಿಟ್ಟು ಮನೆಗಳಿಗೆ ತೆರಳುತ್ತಾರೆ. ಕೈಗಾರಿಕಾ ಕ್ಷೇತ್ರದಲ್ಲಿನ ಉತ್ಪಾದನೆಯಲ್ಲಿ ಕುಂಠಿತವಾಗುತ್ತದೆ. ನಮ್ಮಂತ ವಿಚಿತ್ರ ದೇಶದಲ್ಲಿ ಇಂತಹ ಸೌಲಭ್ಯ ನೀಡುವುದು ಸರಿಯಲ್ಲ’ ಎಂದರು.