ಕೇವಲ 4 ಕುಟುಂಬಕ್ಕೆ ಸೀಮಿತವಿದ್ದ ನನ್ನ ನೆರೆಮನೆಯ ಮೆಹಂದಿಗೆ ಭಾಗವಹಿಸಿದ್ದೆ -ಜಿಲ್ಲಾಧಿಕಾರಿ ಸ್ಪಷ್ಟನೆ
ಉಡುಪಿ ಎ.24 (ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸುವ ಸಲುವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಮೊದಲಾದ ನಿಯಮಗಳನ್ನು ಜಾರಿ ಮಾಡಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸುವ ಸಾರ್ವಜನಿಕರ ವಿರುದ್ಧ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ಆದರೆ ಅನೇಕ ಸಂದರ್ಭಗಳಲ್ಲಿ ನಿಯಮ ಜಾರಿ ಮಾಡುವವರೇ ನಿಯಮ ಸರಿಯಾಗಿ ಪಾಲಿಸುತ್ತಿಲ್ಲ ಎಂಬ ಮಾತುಗಳು ಕೂಡಾ ಕೇಳಿ ಬರುತ್ತಿದೆ.
ಈಗಾಗಲೇ ಜನ ನಾಯಕರು ತಮ್ಮ ಖಾಸಗೀ ಹಾಗೂ ರಾಜಕೀಯ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರ ಪಾಲಿಸದೇ, ಮಾಸ್ಕ್ ಧರಿಸದೇ ಭಾಗವಹಿಸಿರುವ ಕುರಿತಾಗಿ ಅನೇಕ ಕಡೆಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಇದೀಗ ಜಿಲ್ಲೆಯಲ್ಲಿಯೂ ಇಂತಹ ಘಟನೆಗಳು ನಡೆಯುತ್ತಿದ್ದು ಸಾರ್ವಜನಿಕರಿಂದ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ. ನಿನ್ನೆಯಷ್ಟೇ ಕೋರ್ಟ್ ಆವರಣದಲ್ಲಿ ನಡೆದ ಔತನಕೂಟವೊಂದರಲ್ಲಿ ನಿಯಮ ಮೀರಿ ಜನರು ಭಾಗವಹಿಸಿದ್ದು ಕಂಡು ಬಂದಿತ್ತು ಇದು ಒಂದೆಡೆ ಆಕ್ರೋಶಕ್ಕೆ ಕಾರಣವಾಗಿದ್ದರೆ, ಮತ್ತೊಂದೆಡೆ ಈ ಕಾರ್ಯಕ್ರಮದ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಸ್ಪಂದಿಸಿರಲಿಲ್ಲ ಎಂಬ ಮಾತುಗಳೂ ಕೇಳಿಬಂದಿದ್ದು ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆಗೆ ಗುರಿಯಾಗಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಈ ಪ್ರಕರಣದಲ್ಲಿ ಕರ್ತವ್ಯಲೋಪ ಮಾಡಿದ ಅಧಿಕಾರಿಗೆ ನೋಟಿಸ್ ನೀಡಿದ್ದೇವೆ. ಅಲ್ಲದೇ ಸಂಬಂಧಪಟ್ಟ ಆಯೋಜಕರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದರ
ಇನ್ನು ಕೆಲವು ದಿನಗಳ ಹಿಂದಯಷ್ಟೇ ಜಿಲ್ಲಾಧಿಕಾರಿಗಳು ನಗರದ ಕೆಲವೆಡೆ ಕಾರ್ಯಾಚರಣೆ ಮಾಡಿ ಮಾಸ್ಕ್ ಧರಿಸದವರ, ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ದಂಡ ವಿಧಿಸಿ ಕ್ರಮ ಕೈಕೊಂಡಿದ್ದರು. ಇದೀಗ ಸ್ವತಃ ಜಿಲ್ಲಾಧಿಕಾರಿಯವರೇ ನಿನ್ನೆ ಎಎಸ್ ಪಿ ಮಗಳ ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಸ್ಕ್ ಇಲ್ಲದೇ ಫೋಟೋಗೆ ಫೋಸ್ ಕೊಟ್ಟಿದ್ದಾರೆ. ಇದೀಗ ಈ ಫೋಟೋ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ವೈರಲ್ ಆಗಿದ್ದು ಜಿಲ್ಲಾಧಿಕಾರಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು ಅಲ್ಲದೇ ಜಿಲ್ಲಾಧಿಕಾರಿಯ ವಿರುದ್ಧದ ಅನೇಕ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು..
ಇದೀಗ ಶುಕ್ರವಾರ ಕೋರ್ಟ್ ಆವರಣದಲ್ಲಿ ನಡೆದ ನೂರಾರು ಜನರಿಗೆ ಭೋಜನ ವ್ಯವಸ್ಥೆ, ಹಾಗೂ ಎಎಸ್‍ಪಿ ಮಗಳ ಮೆಹಂದಿ ಕಾರ್ಯಕ್ರಮದಲ್ಲಿ ಡಿಸಿ ಮಾಸ್ಕ್ ಇಲ್ಲದೇ ಭಾಗವಹಿಸಿರುವುದು. ಅಲ್ಲದೆ ಎ.22 ರಂದು ಮಧ್ಯಾಹ್ನದ ವೇಳೆ ತೆರದುಕೊಂಡಿದ್ದ ಅಂಗಡಿಗಳನ್ನು ನಗರ ಸಭೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಏಕಾಏಕಿ ಕಾರ್ಯಾಚರಣೆ ನಡೆಸಿ ನಿರ್ದಾಕ್ಷಿಣ್ಯವಾಗಿ ಮುಚ್ಚಿಸಿದ್ದರ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು. ಈ ಕೋವಿಡ್ ಮಾರ್ಗ ಸೂಚಿಗಳ ಪಾಲನೆಯಲ್ಲಿ ಉಳ್ಳವರಿಗೊಂದು ನ್ಯಾಯ ಇಲ್ಲದವರಿಗೊಂದು ನ್ಯಾಯವೇ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಜಿಲ್ಲಾಧಿಕಾರಿ ಜಿ. ಜಗದೀಶ್ ಸ್ಪಷ್ಟನೆ: ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿಯವರ ಮಾಸ್ಕ್ ಧರಿಸದೆ ಇರುವ ಫೋಟೋ ವೈರಲ್ ಆಗಿರುವ ವಿಚಾರವಾಗಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಸ್ಪಷೀಕರಣ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ‘ನನ್ನ ಮನೆಯ ಪಕ್ಕದಲ್ಲಿರುವ ಹೆಚ್ಚುವರಿ ಎಸ್ಪಿ ಮನೆಯಲ್ಲಿ ಅವರ ಮಗಳ ಮೆಹಂದಿ ಕಾರ್ಯಕ್ರಮವನ್ನು ಕೇವಲ ನಾಲ್ಕು ಕುಟುಂಬಗಳಿಗೆ ಸೀಮಿತಗೊಳಿಸಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಅವರ ಕ್ಲೋಸ್ ಫ್ಯಾಮಿಲಿಯ ಕೆಲವೇ ಕೆಲವು ಮಂದಿ ಸೇರಿದ್ದರು.
ಅದು ಸಾರ್ವಜನಿಕ ಸ್ಥಳ ಅಲ್ಲ. ಆದುದರಿಂದ ಅಲ್ಲಿ ಮಾಸ್ಕ್ ಧರಿಸಬೇಕೆಂಬುದು ಕಡ್ಡಾಯ ಅಲ್ಲ. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕಾಗಿರುವುದು ಸಾರ್ವಜನಿಕ ಸ್ಥಳದಲ್ಲಿ ಮಾತ್ರ’ ಅಲ್ಲದೆ ಈ ಕಾರ್ಯಕ್ರಮದಲ್ಲಿ ನಾವು ಐದಾರು ನಿಮಿಷಗಳ ಕಾಲ ಮಾತ್ರ ಇದ್ದೆವು. ಮಧುಮಗಳ ಕೋರಿಕೆ ಮೇರೆಗೆ ಆಕೆಯೊಂದಿಗೆ ಫೋಟೋಗಾಗಿ ಒಂದು ನಿಮಿಷ ಮಾತ್ರವೇ ಮಾಸ್ಕ್ ತೆಗೆದಿದ್ದೇನೆ. ಆ ಕಾರ್ಯಕ್ರಮದಲ್ಲಿ ನಾನು ಊಟ ಕೂಡ ಮಾಡದೆ ಬಂದಿದ್ದೇನೆ. ಶುಕ್ರವಾರ ರಾತ್ರಿ 8.40ಕ್ಕೆ ಆ ಕಾರ್ಯಕ್ರಮಕ್ಕೆ ಹೋಗಿ 8.50ಕ್ಕೆ ಕರ್ಫ್ಯೂಗಿಂತ ಮೊದಲೇ ಮನೆ ಸೇರಿದ್ದೇನೆ ಎಂದು ತಿಳಿಸಿದ್ದಾರೆ.