ಕುಂದಾಪುರ: ಅಪ್ರಾಪ್ತೆಯ ಮಾನಭಂಗಕ್ಕೆ ಯತ್ನಿಸಿದ ಆರೋಪಿಗೆ ಪೋಕ್ಸೋ ಕಾಯ್ದೆಯಡಿ 3 ವರ್ಷ ಸಜೆ
ಕುಂದಾಪುರ ಎ.23(ಉಡುಪಿ ಟೈಮ್ಸ್ ವರದಿ): ಅಪ್ರಾಪ್ತ ವಯಸ್ಸಿನ ಬಾಲಕಿಯ ಮಾನಭಂಗಕ್ಕೆ ಯತ್ನಿಸಿ, ಜೀವ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯು ದೋಷಿ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಅಜಿತ್ ಶೆಟ್ಟಿ (34) ಪ್ರಕರಣದ ಆರೋಪಿ. ಪ್ರಕರಣಕ್ಕೆ ಸಂಬಂಧಿಸಿ 13 ಸಾಕ್ಷಿದಾರರ ಪೈಕಿ ನ್ಯಾಯಾಲಯದಲ್ಲಿ 12ಮಂದಿ ವಿಚಾರಣೆ ನಡೆದಿದ್ದು ಸಂತ್ರಸ್ತೆ ಯುವತಿ ಹಾಗೂ ಪ್ರತ್ಯಕ್ಷ ಸಾಕ್ಷಿಗಳ ವಿಚಾರಣೆಯನ್ನು ಆಲಿಸಿದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎರ್ಮಾಳು ಕಲ್ಪನಾ ಅವರು ಆರೋಪಿ ದೋಷಿ ಎಂದು ತೀರ್ಪು ನೀಡಿದ್ದಾರೆ. ಉಡುಪಿಯ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಅವರು ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಪೋಕ್ಸೋ ಕಾಯ್ದೆಯಡಿ 3 ವರ್ಷ ಜೈಲು ವಾಸ ಮತ್ತು 10 ಸಾವಿರ ದಂಡ, ಜೀವ ಬೆದರಿಕೆ (ಐಪಿಸಿ ಸೆಕ್ಷನ್ 506) ಹಾಕಿದ್ದಕ್ಕೆ 1 ವರ್ಷ ಸಜೆ, 1,500 ದಂಡ ವಿಧಿಸಲಾಗಿದೆ. ಒಟ್ಟು 11,500 ದಂಡದಲ್ಲಿ 5 ಸಾವಿರ ಸರ್ಕಾರಕ್ಕೆ ಹಾಗೂ 6,500 ಹಣ ಸಂತ್ರಸ್ತೆಗೆ ನೀಡಲು ಮತ್ತು 25 ಸಾವಿರವನ್ನು ಕಾನೂನು ಸೇವಾ ಪ್ರಾಧಿಕಾರದ ಮೂಲಕ ಸಂತ್ರಸ್ತೆಗೆ ನೀಡಲು ನ್ಯಾಯಾಲಯ ಆದೇಶಿಸಿದೆ.
ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2015ರಲ್ಲಿ ಈ ಘಟನೆ ನಡೆದಿತ್ತು. ಕೂಲಿ ಕೆಲಸ ಮಾಡಿಕೊಂಡಿದ್ದ ಅಜಿತ್ ತನ್ನ ನೆರೆಮನೆಯವಳಾದ 15 ವರ್ಷದ ಬಾಲಕಿಯನ್ನು ಸಾರ್ವಜನಿಕ ಬಾವಿ ಬಳಿ ಮಾನಭಂಗಕ್ಕೆ ಯತ್ನಿಸಿದ್ದ. ನೆರೆಕೆರೆಯವರು ಬರುವುದನ್ನು ಗಮನಿಸಿ ಆಕೆಗೆ ಜೀವಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದ. ಈ ಬಗ್ಗೆ ಅಜಿತ್ ಶೆಟ್ಟಿ ಮೇಲೆ ಪೋಕ್ಸೋ ಕಾಯ್ದೆಯಡಿ ಅಂದಿನ ಕುಂದಾಪುರ ನಗರ ಠಾಣೆ ಪಿಎಸ್ಐ ನಾಸೀರ್ ಹುಸೇನ್ ಪ್ರಕರಣ ದಾಖಲಿಸಿಕೊಂಡಿದ್ದರು, ಅಂದಿನ ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಂ. ಮಂಜುನಾಥ್ ಶೆಟ್ಟಿ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.