ಕೆನಡಾ, ಇಂಗ್ಲೆಂಡ್, ಯುಎಇ, ಆಸ್ಟ್ರೇಲಿಯಾ ಭಾರತದಿಂದ ಬರುವ ವಿಮಾನಗಳಿಗೆ ನಿರ್ಬಂಧ
ಕೆನಡಾ/ಒಟ್ಟಾವಾ: ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕು ದೇಶದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಪ್ರಭಾವ ಬೀರುತ್ತಿದೆ. ಇದೀಗ ಭಾರತದಿಂದ ಆಗಮಿಸುತ್ತಿರುವವರಲ್ಲಿ ಕೋವಿಡ್ ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿರುವ ಹಿನ್ನೆಲೆ ಕೆನಡಾ, ಇಂಗ್ಲೆಂಡ್, ಯುಎಇ, ಆಸ್ಟ್ರೇಲಿಯಾ ಭಾರತದಿಂದ ಬರುವ ವಿಮಾನಗಳಿಗೆ ನಿರ್ಬಂಧ ಹೇರಿದೆ.
ಭಾರತದಿಂದ ಆಗಮಿಸುವ ಪ್ರಯಾಣಿಕರಲ್ಲಿ ಕೋವಿಡ್ 19 ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಬಾರತದಿಂದ ಕೆನಡಾಕ್ಕೆ ಆಗಮಿಸುವ ಎಲ್ಲಾ ವಾಣಿಜ್ಯ ಮತ್ತು ಖಾಸಗಿ ನಾಗರಿಕ ವಿಮಾನಗಳ ಸಂಚಾರವನ್ನು 30 ದಿನಗಳ ಕಾಲ ರದ್ದುಗೊಳಿಸಿರುವುದಾಗಿ ಸಾರಿಗೆ ಸಚಿವ ಒಮರ್ ಅಲ್ಘಾಬ್ರಾ ತಿಳಿಸಿದ್ದಾರೆ. ಭಾರತದಲ್ಲಿ ಕೋವಿಡ್ ಸೋಂಕು ಕ್ಷಿಪ್ರವಾಗಿ ಹೆಚ್ಚಳವಾಗುತ್ತಿರುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಈ ಕ್ರಮವನ್ನು ತೆಗೆದುಕೊಂಡಿದ್ದವೆ, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ನಂತರ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ನಿಷೇಧವು ಎ.23 ರಿಂದ ಜಾರಿಯಾಗಲಿದ್ದು, ಈ ನಿರ್ಬಂಧ ಸರಕು ಸಾಗಾಣೆ ವಿಮಾನಗಳಿಗೆ ಅನ್ವಯಿಸುವುದಿಲ್ಲ. ಲಸಿಕೆ, ರಕ್ಷಣಾ ಉಪಕರಣ ಮತ್ತು ಅಗತ್ಯ ವಸ್ತುಗಳ ಸರಬರಾಜು ನಿರಾತಂಕವಾಗಿ ಮುಂದುವರಿಯಲಿದೆ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ.
ಇನ್ನು ಲಂಡನ್ ನ ಹೀಥ್ರೂ ಏರ್ ಪೋರ್ಟ್‍ಗೆ ಆಗಮಿಸುವ ಭಾರತದ ಹೆಚ್ಚುವರಿ ವಿಮಾನಗಳಿಗೆ ಇಂಗ್ಲೆಂಡ್ ಸರ್ಕಾರ ನಿರಾಕರಿಸಿದೆ. ಅಲ್ಲದೆ, ವಿಮಾನ ಸಂಚಾರಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್ ನ ಹೌಸ್ ಆಫ್ ಕಾಮನ್ಸ್ ಭಾರತವನ್ನು ಕೆಂಪು ಪಟ್ಟಿಗೆ ಸೇರಿಸಲು ನಿರ್ಧರಿಸಿದೆ. ಇದರೊಂದಿಗೆ ಭಾರತದಿಂದ ಆಗಮಿಸುವ ವಿಮಾನಗಳ ಸಂಖ್ಯೆ ಶೇ.30 ರಷ್ಟು ಕಡಿತ ಗೊಳಿಸಲು ಆಸ್ಟ್ರೇಲಿಯಾ ನಿರ್ಧರಿಸಿದೆ. ಅಲ್ಲದೆ ಭಾರತದಂಥ ಹೈ -ರಿಸ್ಕ್ ದೇಶಗಳಿಗೆ ಪ್ರಯಾಣಿಸದಂತೆ ಸೂಚಿಸಿದೆ. ಅಲ್ಲದೆ ಭಾರತ ಸೇರಿದಂತೆ 20 ರಾಷ್ಟ್ರಗಳ ವಿಮಾನ ಸಂಚಾರಕ್ಕೆ ಯುಎಇ ನಿರ್ಬಂಧ ವಿಸ್ತರಿಸಿದೆ. ಇಲ್ಲಿ ಮೇ 17 ರವರೆಗೆ ಈ ಆದೇಶವಿರಲಿದೆ ಎಂದು ತಿಳಿದು ಬಂದಿದೆ.