ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ: ಬಸ್ರೂರು ಶಾಖೆಯ ಸ್ವಂತ ಕಟ್ಟಡ ಎ.27 ರಂದು ಉದ್ಘಾಟನೆ
ಉಡುಪಿ ಎ.20(ಉಡುಪಿ ಟೈಮ್ಸ್ ವರದಿ): ಜಿಲ್ಲೆಯ ಪ್ರಸಿದ್ಧ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಬಸ್ರೂರು ಶಾಖೆಯ ನೂತನ ಸ್ವಂತ ಕಟ್ಟಡ ಉದ್ಘಾಟನಾ ಸಮಾರಂಭ ಎ.27 ರ ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಬಸ್ರೂರಿನ ರೋಜರಿ ಕ್ರೌನ್ ನಲ್ಲಿ ನಡೆಯಲಿದೆ.
ಸಮಾರಂಭವನ್ನು ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾದ ಅತೀ. ವಂದನೀಯ ಸ್ಟ್ಯಾನಿ ತಾವ್ರೊ ಉದ್ಘಾಟಿಸಲಿದ್ದಾರೆ. ಈ ವೇಳೆ ಬಸ್ರೂರಿನ ಸೈಂಟ್ ಫಿಲಿಪ್ ನೇರಿ ಚರ್ಚ್ ನ ಧರ್ಮಗುರು ವಂದನೀಯ ಚಾರ್ಲ್ಸ್ ನೊರೊನ್ಹಾ ಆಶೀರ್ವಚನ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜೋನ್ಸನ್ ಡಿ. ಅಲ್ಮೇಡಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. 1992 ಡಿ. 26 ರಂದು ಆರಂಭಗೊಂಡ ರೋಜರಿ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿಯು 29 ವರ್ಷಗಳಕಾಲ ಉಡುಪಿ ಜಿಲ್ಲೆಯಲ್ಲಿ ಉತ್ತಮ ಸೇವೆಯ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.
30 ಸಾವಿರಕ್ಕೂ ಅಧಿಕ ಗ್ರಾಹಕರನ್ನು ಒಳಗೊಂಡ ಸಂಸ್ಥೆ ಇದಾಗಿದೆ. ಈ ಸೊಸೈಟಿಯ ಪ್ರಧಾನ ಕಚೇರಿ ಕುಂದಾಪುರದಲ್ಲಿದ್ದು, ಕುಂದಾಪುರ, ಬೈಂದೂರು, ಪಡುಕೋಣೆ, ಬಸ್ರೂರು, ಶಿರ್ವ, ಪಿಯುಸ್ ನಗರ/ಕೋಟೇಶ್ವರ, ಗಂಗೊಳ್ಳಿ/ತ್ರಾಸಿ, ಕಲ್ಯಾಣಪುರ/ಸಂತೆ ಕಟ್ಟೆ ಗಳಲ್ಲಿ ಒಟ್ಟು 8 ಶಾಖೆಗಳನ್ನು ಹೊಂದಿದೆ.
ಕುಂದಾಪುರದ ಪ್ರಧಾನ ಕಚೇರಿ ಹಾಗೂ ಶಾಖೆ, ಪಡುಕೋಣೆ, ಸಂತೆಕಟ್ಟೆ, ಬಸ್ರೂರು ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯಚರಿಸುತ್ತಿದೆ. ಅಲ್ಲದೆ ಬೈಂದೂರಿನ ಶಾಖೆಯ ಸ್ವಂತ ಕಟ್ಟಡದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಉಳಿದ ಎಲ್ಲಾ ಶಾಖೆಗಳನ್ನೂ ಕೂಡಾ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸುವ ಯೋಜನೆಯನ್ನು ಸೊಸೈಟಿಯ ಆಡಳಿತ ಮಂಡಳಿ ಹೊಂದಿದೆ.
ಸೊಸೈಟಿಯಲ್ಲಿ ಪಿಗ್ಮಿ ಸೌಲಭ್ಯ ಇದ್ದು, ಗೃಹ ಸಾಲ, ಕೈಗಾರಿಕೆ ಸಾಲ, ವಾಹನ ಸಾಲ ಮದುವೆ ಸಮಾರಂಭಗಳಿಗೆ ಸಾಲ, ಆಭರಣ ಈಡಿನ ಸಾಲ, ವ್ಯಾಪಾರ ಸಾಲ ಸೇರಿ ಎಲ್ಲಾ ಬಗೆಯ ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ. ಈ ಸೊಸೈಟಿಯಲ್ಲಿ 83 ಕೋಟಿ ಯಷ್ಟು ಮುಂಗಡ ಸಾಲ ಸೌಲಭ್ಯ ವಿದ್ದು, 106 ಕೋಟಿಗೂ ಅಧಿಕ ಠೇವಣಿ ಹೊಂದಿದೆoದು ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜೋನ್ಸನ್ ಡಿ ಅಲ್ಮೇಡಾ ಮಾಹಿತಿ ನೀಡಿದ್ದಾರೆ. ನಿರಂತರ ಲಾಭಗಳಿಸುತ್ತಾ ಬಂದಿರುವ ಸೊಸೈಟಿಯು 1993 ರಿಂದ ಶೇರುದಾರರಿಗೆ ಲಾಭಾಂಶ (ಡಿವಿಡೆಂಟ್) ನೀಡುತ್ತಾ ಬಂದಿದ್ದು, ಕಳೆದ ಆರ್ಥಿಕ ವರ್ಷದಲ್ಲಿ ಶೇ. 17.5 ಡಿವಿಡೆಂಟ್ ನ್ನು ನೀಡಿರುತ್ತಾರೆ..
ಉತ್ತಮ ಸೇವೆ ಗಳನ್ನು ನೀಡುವಲ್ಲಿ ಹೆಸರುವಾಸಿಯಾಗಿರುವ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ 2019 ರಲ್ಲಿ ರಾಜ್ಯ ಮಟ್ಟದ 66 ನೇ ಅಖಿಲ ಭಾರತ ಸಹಾಕಾರ ಸಪ್ತಾಹ ಉಡುಪಿ ಇದರ ವತಿಯಿಂದ ಉತ್ತಮ ಸಹಕಾರ ಸಂಘ ಪ್ರಶಸ್ತಿ ಲಭಿಸಿದೆ. ಅಲ್ಲದೆ ಗುಣಮಟ್ಟದ ವ್ಯವಹಾರ ಮತ್ತು ಸರ್ವತೋಮುಖ ಪ್ರಗತಿ ಸಾಧಿಸಿದಕ್ಕಾಗಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಪ್ರಶಸ್ತಿ ಪತ್ರ ಲಭಿಸಿದೆ.
ಇದಾಗಲೇ ನಿಗದಿ ಪಡಿಸಿರುವಂತೆ ದಿನಾಂಕ 25/04/2021 ರಂದು ನಡೆಯಬೇಕಾಗಿದ್ದು, ಸರ್ಕಾರದ ಕೋವಿಡ್ ನಿಯಮದಂತೆ ಭಾನುವಾರದಂದು ಕರ್ಫ್ಯೂ ಇರುವುದರಿಂದ ಈ ಕಾರ್ಯಕ್ರಮವನ್ನು ದಿನಾಂಕ27/04/2021 ಮಂಗಳವಾರ ಬೆಳಿಗ್ಗೆ ಸರಿಯಾಗಿ *ರಾಜ್ಯ ಸರ್ಕಾರವು ತಿಳಿಸಿದ ಕೊರೊನದ ನಿಯಮದ ಪ್ರಕಾರ* 9 ಗಂಟೆಗೆ ಉದ್ಘಾಟಿಸುವುದೆಂದು ನಿರ್ಧರಿಸಲಾಗಿದೆ. ಅದುದರಿಂದ ತಾವೆಲ್ಲರೂ ಸಹಕರಿಸಬೇಕಾಗಿ ವಿನಂತಿ.