ಮೇ 14 ರಂದು ಶೀರೂರು ಮಠದ ಉತ್ತರಾಧಿಕಾರಿಯ ಪಟ್ಟಾಭಿಷೇಕ

ಉಡುಪಿ ಎ.21(ಉಡುಪಿ ಟೈಮ್ಸ್ ವರದಿ): ಉಡುಪಿಯ ಶ್ರೀ ಕೃಷ್ಣ ಮಠದ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ಉತ್ತರಾಧಿಕಾರಿಯ ಪಟ್ಟಾಭಿಷೇಕ ಇದೇ ಮೇ. 14 ರಂದು ನಡೆಯಲಿದೆ ಎಂದು ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ತಿಳಿಸಿದರು.

ಈ ಬಗ್ಗೆ ಇಂದು ಉಡುಪಿಯಲ್ಲಿ ಮಾಹಿತಿ ನೀಡಿ ಮಾತನಾಡಿದ ಅವರು, ಅನಿರುದ್ಧ ಎಂಬ ವಟುವನ್ನು ಮಠದ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿದ್ದು, ಮೇ 14ರಂದು ಪಟ್ಟಾಭಿಷೇಕ ನಡೆಯಲಿದೆ. ಶೀರೂರು ಶ್ರೀಗಳ ನಂತರ ಮಠದ ಉತ್ತರಾಧಿಕಾರಿಯ ನೇಮಕಕ್ಕಾಗಿ ಅನೇಕ ಪ್ರದೇಶಗಳಿಗೆ ತೆರಳಿ ಅನೇಕರ ಜಾತಕಗಳನ್ನು ಪರಿಶೀಲನೆ ನಡೆಸಲಾಗುತ್ತಿತ್ತು. ಈ ಅವಧಿಯಲ್ಲಿ  ಈ ಬಾಲಕನಿಗೆ  ಸನ್ಯಾಸತ್ವದಲ್ಲಿ  ಸ್ವತಹ ಆಸಕ್ತಿ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಬಳಿಕ ಈತನ ಜಾತಕ ಪರಿಶೀಲನೆ ನಡೆಸಿದಾಗ ಸನ್ಯಾಸ ಯೋಗ ಮತ್ತು ಪೀಠಾಧಿಪತ್ಯದ ಯೋಗ ಇರುವುದು ತಿಳಿದು ಬಂದಿತ್ತು.

ಆದರೆ ಬಾಲಕನನ್ನು ಎರಡು ವರ್ಷಗಳ ಅವಧಿಯವರೆಗೆ ಸನ್ಯಾಸಿಯ ಮಾನಸಿಕ ಸಿದ್ಧತೆ, ಮಠವನ್ನು ನಡೆಸಲು ಯೋಗ್ಯರು ಹೌದೋ ಅಲ್ಲವೋ ಎನ್ನುವ ನಿಟ್ಟಿನಲ್ಲಿ ವಿವಿಧ ಪರೀಕ್ಷೆಗೆ ಒಳಪಡಿಸಲಾಗಿತ್ತು, ಅನೇಕ ಪರೀಕ್ಷಗಳ ಬಳಿಕ ಬಾಲಕ ಉತ್ತಮ ಮನೋಧರ್ಮ, ವೇದಾಂತ ಅಧ್ಯಯನದ ಆಸಕ್ತಿ ಹೀಗೆ ಎಲ್ಲಾ ಗುಣಗಳು ಇದ್ದ ಕಾರಣ ಯೋಗ್ಯ ಎಂದು ತಿಳಿದ ಬಳಿಕ ಈತನನ್ನು ಪೀಠಾಧಿಪತಿಯಾಗಿ ನೇಮಕ ಮಾಡುವ ನಿರ್ಧಾರಕ್ಕೆ ಬರಲಾಯಿತು. ಅಲ್ಲದೆ ಬಾಲಕನ ಆಯ್ಕೆ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿ ಇತರ ಎಲ್ಲಾ ಮಠಾಧೀಶರ ಒಪ್ಪಿಗೆ ಪಡೆದುಕೊಂಡೇ ಈ ಪ್ರಕ್ರಿಯೆಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಎಲ್ಲರ ಒಪ್ಪಿಗೆ ಪಡೆದು ಈ ಘೋಷಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಮೇ.14ರಂದು ಪಟ್ಟಾಭಿಷೇಕ ಶಿರಸಿ ಬಳಿಯಿರುವ ಸೋದೆ ಮೂಲ ಮಠದಲ್ಲಿ ಮೇ11 ರಿಂದ 14ರವರೆಗೆ ಸನ್ಯಾಸ ಸ್ವೀಕಾರ, ಪಟ್ಟಾಭಿಷೇಕ ಮುಂತಾದ ಕಾರ್ಯಕ್ರಮಗಳು ನಡೆಯಲಿದೆ. ಮೇ.13ರ ಬೆಳಗ್ಗೆ 7.30ರಿಂದ 8 ಗಂಟೆಯೊಳಗಿನ ಮುಹೂರ್ತದಲ್ಲಿ ಸನ್ಯಾಸ ಸ್ವೀಕಾರ ನಡೆಯಲಿದೆ. ಮೇ.14ರಂದು ಮಧ್ಯಾಹ್ನ 12.35ರಿಂದ 12.50ರ ಅಭಿಜಿನ್ ಮುಹೂರ್ತದಲ್ಲಿ ಶೀರೂರು ಮಠದ 31ನೇ ಮಠಾಧಿಪತಿಯಾಗಿ ಪಟ್ಟಾಭಿಷೇಕ ನಡೆಯಲಿದೆ ಎಂದು ತಿಳಿಸಿದರು.

ಅನಿರುದ್ಧ ಅವರು, ಧರ್ಮಸ್ಥಳ ಸಮೀಪದ ನಿಡ್ಲೆ ಗ್ರಾಮ ಮೂಲದ ಡಾ. ಎಂ.ಉದಯ್ ಕುಮಾರ್ ಸರಳತ್ತಾಯ ಮತ್ತು ಶ್ರೀವಿದ್ಯಾ ದಂಪತಿಯ ಪುತ್ರನಾಗಿದ್ದಾರೆ, ವಟು ಅನಿರುದ್ಧ 10ನೇ ತರಗತಿಯಲ್ಲಿ ವ್ಯಾಸಂಗ ಪೂರೈಸಿದ್ದಾರೆ,  ಬಾಲ್ಯದಿಂದಲೇ ಧಾರ್ಮಿಕ ಆಚರಣೆಗಳಲ್ಲಿ ಆಸಕ್ತಿ ಹೊಂದಿದ್ದು, ವಟುವಿನ ಹಿನ್ನೆಲೆ, ಗುಣ, ಜ್ಞಾನ, ಆಸಕ್ತಿ ಹಾಗೂ ಜಾತಕ ಎಲ್ಲವನ್ನೂ ಪ್ರತ್ಯಕ್ಷ- ಪರೋಕ್ಷವಾಗಿ ಪರಿಶೀಲನೆ ಮಾಡಿದಾಗ ಎಲ್ಲಾ ಪರೀಕ್ಷೆಯಲ್ಲಿ ವಟು ಅನಿರುದ್ಧ ಸಮಂಜಸವಾಗಿ ಕಂಡಿದ್ದಾರೆ. ಈ ಹಿನ್ನೆಲೆಯಲ್ಲಿ  ವಟುವಿಗೆ ಸನ್ಯಾಸ ದೀಕ್ಷೆ ನೀಡಲು ಸಂಕಲ್ಪಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!