ಶಿರೂರು ಮಠಕ್ಕೆ ನೂತನ ಪೀಠಾಧಿಪತಿ ನೇಮಕ ವಿಚಾರ- ಪೂರ್ವಾಶ್ರಮದ ಸಹೋದರರ ಆಕ್ಷೇಪ
ಉಡುಪಿ ಎ.20(ಉಡುಪಿ ಟೈಮ್ಸ್ ವರದಿ): ಉಡುಪಿ ಶಿರೂರು ಮಠಕ್ಕೆ ನೂತನ ಪೀಠಾಧಿಪತಿ ನೇಮಕ ವಿಚಾರಕ್ಕೆ ಸಂಬಂಧಿಸಿ ಲಕ್ಷ್ಮೀವರ ತೀರ್ಥರ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು ಮಠದ ವ್ಯವಹಾರ, ಆಸ್ತಿಪಾಸ್ತಿ, ತೆರಿಗೆ ನಿರ್ವಹಣೆಯಲ್ಲಿ ಪಾರದರ್ಶಕತೆ ಇಲ್ಲದಿರುವುದು ತಿಳಿದು ಬಂದಿದ್ದು, ಈ ಬಗ್ಗೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಆದ್ದರಿಂದ ಪ್ರಕರಣ ನ್ಯಾಯಾಲಯದಲ್ಲಿರುವಾಗ ಮಠದ ಯಾವುದೇ ಪ್ರಕ್ರಿಯೆಗಳು ನಡೆಯಬಾರದು ಎಂದು ಆಗ್ರಹಿಸಿದರು.
ರಾಮ ನವಮಿಯಂದು ದ್ವಂದ್ವ ಮಠವಾದ ಸೋದೆ ಮಠಾಧೀಶರಿಂದ ಶಿರೂರು ಮಠಕ್ಕೆ ನೂತನ ಪೀಠಾಧಿಪತಿ ಘೋಷಣೆ ಮಾಡುತ್ತಿದ್ದಾರೆ. ಮಠಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿ ಇರುವಾಗ ಪೀಠಾಧಿಪತಿ ನೇಮಕ ಸರಿಯಲ್ಲ.
ಅಲ್ಲದೆ ಮಠದ ನಿಯಮಾವಳಿ ಪ್ರಕಾರ ಮಠದ ಪೀಠಾಧಿಪತಿಯಾಗಲು ಕನಿಷ್ಠ ಹತ್ತು ವರ್ಷದ ವೇದ ಅಧ್ಯಯನ ಮಾಡಿದವರನ್ನು ನೇಮಕ ಮಾಡಬೇಕು ಎಂಬ ನಿಯಮವಿದೆ. ಆದರೆ ಇಲ್ಲಿ ಎಳೆಯ ವಯಸ್ಸಿನ ವಟುವನ್ನು ನಾಳೆ ಘೋಷಣೆ ಮಾಡುತ್ತಿದ್ದಾರೆ. ಆದರೆ ನೂತನ ಪೀಠಾಧಿಪತಿ ನೇಮಕಕ್ಕೆ ನಮ್ಮ ಸಮ್ಮತಿ ಇಲ್ಲ ಎಂದು ಹೆಳಿದ್ದಾರೆ.
ಈ ವೇಳೆ ಶೀರೂರು ಶ್ರೀಗಳ ಪೂರ್ವಾಶ್ರಮದ ಸಹೋದರ ವಾದಿರಾಜ ಆಚಾರ್ಯ ಅವರು ಮಾತನಾಡಿ. ಉಡುಪಿಯಲ್ಲಿ ಶೀರೂರು ಮಠದ ಕೊಡುಗೆ ಅಪಾರವಾಗಿದೆ. ಆದರೆ ಮಠಕ್ಕೆ ಸಂಬಂಧಿಸಿ ತೆರಿಗೆ, ಸಾಲ ಇದೆ ಎಂಬಿತ್ಯಾದಿ ಆಪಾದನೆ ಮಾಡಲಾಗಿದೆ. ಶೀರೂರು ಶ್ರೀಗಳು ಕೀರ್ತಿ ಶೇಷರಾದ ಬಳಿಕ 4 ತಿಂಗಳ ಒಳಗೆ ಯೋಗ್ಯ ಯತಿಯನ್ನು ಪೀಠಾಧಿಪತಿಯಾಗಿ ನೇಮಕ ಮಾಡಬೇಕಿತ್ತು. ಆದರೆ ಈ ಕಾರ್ಯ ನಿಗದಿತ ಅವಧಿಯಲ್ಲಿ ಆಗಿರಲಿಲ್ಲ. ಕಳೆದ ಎರಡು ವರ್ಷಗಳಿಂದ ಮಠದ ಪೀಠ ಖಾಲಿ ಇರುವ ಬಗ್ಗೆ ಅಷ್ಟ ಮಠಾಧೀಶರ ಗಮನಕ್ಕೂ ತಂದಿದ್ದೇವೆ. ಆದರೆ ಆಗ ವಿವಿಧ ಕಾರಣಗಳನ್ನು ನೀಡಿ ಈ ಕಾರ್ಯವನ್ನು ಮುಂದೂಡಲಾಗುತ್ತಿತ್ತು.
ನಮ್ಮ ಕುಟುಂಬಕ್ಕೆ ಮಠದ ಆಳ್ವಿಕೆ ಕೈ ತಪ್ಪಿರುವ ವಿಚಾರಕ್ಕೆ ಬೇಸರ ಇಲ್ಲ ಆದರೆ, ಮಠದಲ್ಲಿ ಯೋಗ್ಯ ಯತಿಗಳಿಂದ ಉತ್ತಮ ರೀತಿಯಲ್ಲಿ ಆಡಳಿತ ನಡೆಸಿಕೊಂಡು ಹೋಗುವುದು ಮುಖ್ಯವಾಗಿದೆ. ಮಠದ ವಿರುದ್ಧ ಯಾವುದೇ ಹೋರಾಟ ನಡೆಸಲು ಇಷ್ಟವಿಲ್ಲ ಆದರೆ ಸದ್ಯದ ಪರಿಸ್ಥಿತಿಯಲ್ಲಿ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದರು.
ಜುಲೈ 19, 2018 ರಂದು ಸಂಶಯಾಸ್ಪದ ರೀತಿಯಲ್ಲಿ ಲಕ್ಷ್ಮೀವರತೀರ್ಥ ಸ್ವಾಮೀಜಿ ನಿಧನರಾಗಿದ್ದ ಬಳಿಕ ಶಿರೂರು ಮಠ ಸೋದೆ ಮಠದ ನಿರ್ವಹಣೆಯಲ್ಲಿರುವ ಕಾರ್ಯಚರಿಸುತ್ತಿದೆ.