ತಮಿಳುನಾಡು: ನೈಟ್ ಕರ್ಫ್ಯೂ, ಸಂಡೇ ಲಾಕ್ ಡೌನ್, ಪಿಯುಸಿ ಪರೀಕ್ಷೆ ಮುಂದೂಡಿಕೆ

ಚೆನ್ನೈ: ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ರಾತ್ರಿ 10 ಗಂಟೆಯಿಂದ ಬೆಳಗ್ಗೆ 4 ಗಂಟೆಯವರೆಗೆ ಭಾಗಶ: ಲಾಕ್ ಡೌನ್ ಹಾಗೂ ಭಾನುವಾರ ಸಂಪೂರ್ಣ ಲಾಕ್ ಡೌನ್ ನ್ನು ಜಾರಿಗೊಳಿಸಿದೆ.  ಮಂಗಳವಾರದಿಂದ ನಿರ್ಬಂಧಗಳು ಅನ್ವಯವಾಗಲಿವೆ ಎಂದು ಸರ್ಕಾರ ಹೇಳಿದೆ. 

12 ತರಗತಿ ಬೋರ್ಡ್ ಪರೀಕ್ಷೆಯನ್ನು ಮುಂದೂಡಿರುವ ಸರ್ಕಾರ, ಆನ್ ಲೈನ್ ತರಗತಿಗಳನ್ನು ಮಾತ್ರ ತೆಗೆದುಕೊಳ್ಳುವಂತೆ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ.ಆದಾಗ್ಯೂ, ಸದ್ಯ ನಡೆಯುತ್ತಿರುವ ಪ್ರಾಯೋಗಿಕ ಪರೀಕ್ಷೆಗಳು ವೇಳಾಪಟ್ಟಿಯ ಪ್ರಕಾರ ನಡೆಯುತ್ತವೆ. ಕೋವಿಡ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರವಾಸಿ ತಾಣಗಳು, ಬೀಚ್ ಗಳು, ಪಾರ್ಕ್ ಗಳನ್ನು ಮುಚ್ಚಲಾಗುತ್ತಿದೆ.

ಐಟಿ ಮತ್ತು ಐಟಿಇಎಸ್ ಕಂಪನಿಗಳು ಶೇ.50 ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸುವಂತೆ, ಉಳಿದವರು ಮನೆಯಿಂದ ಕೆಲಸ ಮಾಡುವಂತೆ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ. ಶಾಫಿಂಗ್ ಮಾಲ್ ಗಳು, ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ ಗಳು, ತರಕಾರಿ ಮತ್ತು ಹಣ್ಣಿನ ಅಂಗಡಿಗಳು, ಬಟ್ಟೆ ಮತ್ತು ಆಭರಣ ಶೋ ರೂಮ್ ಗಳು ಮತ್ತಿತರ ವಾಣಿಜ್ಯ ಮಳಿಗೆಗಳು ಶೇ. 50 ರಷ್ಟು ಗ್ರಾಹಕರೊಂದಿಗೆ 9 ಗಂಟೆಯವರೆಗೂ ಮಾತ್ರ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.

ಭಾನುವಾರ ಹಾಲು, ಔಷಧ ಮತ್ತಿತರ ಅವಶ್ಯಕ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಅಂದು ಸಂಪೂರ್ಣ ಲಾಕ್ ಡೌನ್ ಇರಲಿದೆ. 

ತಮಿಳುನಾಡಿನಲ್ಲಿ  ಕೋವಿಡ್- ನಿರ್ಬಂಧಗಳು ಇಂತಿವೆ.

*  ರಾತ್ರಿ 10 ಗಂಟೆಯಿಂದ ಬೆಳಗ್ಗೆ 4 ಗಂಟೆಯವರೆಗೆ ರಾತ್ರಿ ಕರ್ಫ್ಯೂ. ಸರ್ಕಾರಿ ಮತ್ತು ಖಾಸಗಿ ಬಸ್ ಗಳು, ಟ್ಯಾಕ್ಸಿಗಳು, ಆಟೋಗಳು, ಮತ್ತು ಖಾಸಗಿ ವಾಹನಗಳಿಗೆ ಅವಕಾಶವಿಲ್ಲ.

* ರಾತ್ರಿ 10 ಗಂಟೆಯಿಂದ ಬೆಳಗ್ಗೆ 4 ಗಂಟೆಯ ನಡುವೆ ಅಂತರ್ ರಾಜ್ಯ- ಅಂತರ್ ಜಿಲ್ಲೆ ಸಾರಿಗೆಗೆ ಅವಕಾಶವಿಲ್ಲ

* ಈ ಅವಧಿಯಲ್ಲಿ ತುರ್ತು ವೈದ್ಯಕೀಯ ಅಗತ್ಯ ವಾಹನಗಳು , ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳಿಗೆ ತೆರಳಲು ಅವಕಾಶ. ಹಾಲು, ಇಂಧನ, ಔಷಧಿ ಸಾಗಾಟದಂತಹ ವಾಹನಗಳಿಗೆ ಅನುಮತಿ 

*  ಕಂಟೈನ್ ಮೆಂಟ್ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ವಿಶೇಷ ತಂಡಗಳು ಎಲ್ಲಾ ಜಿಲ್ಲೆಗಳಲ್ಲಿ ರಚನೆ

* ಥಿಯೇಟರ್ ಗಳು ಶೇ. 50 ರಷ್ಟು ಆಸನ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬಹುದು, ಸುರಕ್ಷತಾ ನಿಯಮಗಳು ಕಡ್ಡಾಯ. 

* ಟೀ ಅಂಗಡಿಗಳ ಮುಂಭಾಗ ಜನ ಸೇರುವಂತಿಲ್ಲ. ಗ್ರಾಹಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು, ಶುಚಿತ್ವ ಕಾಪಾಡಿಕೊಳ್ಳಬೇಕು.

Leave a Reply

Your email address will not be published. Required fields are marked *

error: Content is protected !!