ಹಾಸನದಲ್ಲಿ ರೇವ್ ಪಾರ್ಟಿ ಆಯೋಜಿಸಿದ್ದ ಹೆಡ್ ಕಾನ್ಸ್ಟೇಬಲ್ ಶ್ರೀಲತಾ ಸಸ್ಪೆಂಡ್!
ಮಂಗಳೂರು ಎ.17: ಹಾಸನದಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿ ಸಿಕ್ಕಿಬಿದ್ದಿರುವ ಮಂಗಳೂರಿನ ನಾರ್ಕೋಟಿಕ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಶ್ರೀಲತಾ ಅವರನ್ನು ಮಂಗಳೂರು ಕಮಿಷನರ್ ಶಶಿಕುಮಾರ್ ಕರ್ತವ್ಯದಿಂದ ಅಮಾನತು ಮಾಡಿದ್ದಾರೆ ಎಂದು ತಿಳಿದು ಬಂದಿದೆ
ಪ್ರಕರಣ ಕ್ಕೆ ಸಂಬಂಧಿಸಿ ಶ್ರೀಲತಾ ವಿರುದ್ಧ ಹಾಸನದ ಆಲೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಆನಂತರ ಹಾಸನ ಎಸ್ಪಿ ಶ್ರೀನಿವಾಸ ಗೌಡ ನೇತೃತ್ವದಲ್ಲಿ ಆರೋಪಿಗಳನ್ನು ತನಿಖೆ ನಡಸಲಾಗಿತ್ತು. ತನಿಖೆ ವೇಳೆ ಶ್ರೀಲತಾ ಮತ್ತು ಆಕೆಯ ಮಗ ಅತುಲ್, ಎಸ್ಟೇಟ್ ಮಾಲೀಕ ಗಗನ್ ಜೊತೆ ವಾರದ ಮೊದಲಿನಿಂದಲೇ ನಿರಂತರ ಸಂಪರ್ಕದಲ್ಲಿದ್ದುದ್ದು ಸಾಬೀತಾಗಿತ್ತು. ಅಲ್ಲದೆ, ರೇವ್ ಪಾರ್ಟಿ ನಡೆಸುವುದಕ್ಕೆ ಸ್ಥಳೀಯ ಪೊಲೀಸರ ಅನುಮತಿಯೂ ಬೇಕಾಗಿ ಬರಲ್ಲ. ಮಂಗಳೂರು ಸಿಸಿಬಿಯಲ್ಲಿ ತಾನು ಎಎಸ್ಐ ಆಗಿದ್ದು ಪ್ರಭಾವ ಹೊಂದಿದ್ದೇನೆ ಎಂದು ಎಸ್ಟೇಟ್ ಮಾಲೀಕನಿಗೆ ಭರವಸೆ ತುಂಬಿದ್ದಳು ಅನ್ನೋ ವಿಚಾರವೂ ತನಿಖೆಯಲ್ಲಿ ಬಯಲಾಗಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಕಮಿಷನರ್ ಶಶಿಕುಮಾರ್, ಹಾಸನ ಎಸ್ಪಿ ನೇತೃತ್ವದಲ್ಲಿ ನಡೆದಿರುವ ತನಿಖೆಯಲ್ಲಿ ಲೋಪ ಆಗಿರುವುದು ಕಂಡುಬಂದಿದೆ. ಸದ್ಯಕ್ಕೆ ಕರ್ತವ್ಯದಿಂದ ಅಮಾನತು ಮಾಡಿದ್ದೇವೆ. ಒಟ್ಟು ಘಟನೆ ಬಗ್ಗೆ ಎಸಿಪಿ ದರ್ಜೆಯ ಅಧಿಕಾರಿಯನ್ನು ನೇಮಿಸಿ, ತನಿಖೆ ನಡೆಸಲಾಗುವುದು. ಆ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಎ.10ರಂದು ಹಾಸನದ ಆಲೂರು ಠಾಣೆ ವ್ಯಾಪ್ತಿಯ ಹೊಂಗರವಳ್ಳಿ ಎಂಬ ನಿಗೂಢ ತಾಣದಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಮಂಗಳೂರು ಮತ್ತು ಬೆಂಗಳೂರಿನ ಅತಿ ಹೆಚ್ಚು ಮಂದಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ವಿಚಾರ ತಿಳಿದ ಹಾಸನ ಪೊಲೀಸರು ನಸುಕಿನಲ್ಲಿ ದಾಳಿ ಮಾಡಿ, 131 ಮಂದಿಯನ್ನು ವಶಕ್ಕೆ ಪಡೆದಿದ್ದರು. ಈ ವೇಳೆ, ಸಾಕಷ್ಟು ಮಾದಕ ದ್ರವ್ಯಗಳು, ಡ್ರಗ್ಸ್ ಮಾತ್ರೆಗಳು, ಗಾಂಜಾ, ಮದ್ಯದ ಬಾಟಲಿಗಳು ಪತ್ತೆಯಾಗಿದ್ದವು. ಈ ವೇಳೆ, ಮಂಗಳೂರಿನ ಲೇಡಿ ಪೊಲೀಸ್ ಶ್ರೀಲತಾ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಆದರೆ, ಪಾರ್ಟಿ ಆಯೋಜನೆ ಮಾಡಿದ್ದ ಶ್ರೀಲತಾ ಮಗ ಅತುಲ್ ಪೊಲೀಸರ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದಾನೆ.