ಕುಂದಾಪುರ: ಅಕ್ರಮ ಕಸಾಯಿ ಖಾನೆಗೆ ಪೊಲೀಸ್ ದಾಳಿ- ಆರೋಪಿ ಪರಾರಿ
ಕುಂದಾಪುರ ಎ.17 : ಅಕ್ರಮ ಕಸಾಯಿ ಖಾನೆಗೆ ಪೊಲೀಸರು ದಾಳಿ ನಡೆಸಿರುವ ಘಟನೆ ಎ.16 ರಂದು ಕುಂದಾಪುರದಲ್ಲಿ ನಡೆದಿದೆ. ಕುಂದಾಪುರದ ಕಸಬಾ ಗ್ರಾಮದ ಎಮ್ ಕೋಡಿಯ ಮೊಯಿದ್ದೀನ್ ಸಾಹೇಬ್ ಇವರ ಮನೆಯ ಹಿಂಬದಿಯ ಶೆಡ್ನಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಕುಂದಾಪುರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸದಾಶಿವ ಆರ್ ಗವರೋಜಿ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳಕ್ಕೆ ತಲುಪಿ ಮರೆಯಲ್ಲಿ ನಿಂತು ಪರಿಶೀಲಿಸಿದಾಗ ಮುನಾಫ್ ಎಂಬಾತನ ಮನೆಯ ಹಿಂಬದಿ ಜಾಗದ ಶೆಡ್ನಲ್ಲಿ ಓರ್ವ ವ್ಯಕ್ತಿ ಅಕ್ರಮವಾಗಿ ಜಾನುವಾರನ್ನು ಕೊಂದು ಮಾಂಸ ಮಾಡುತ್ತಿರುವುದು ತಿಳಿದು ಬಂದಿದೆ. ಈ ವೇಳೆ ಸ್ಥಳಕ್ಕೆ ಹೋಗುತ್ತಿದ್ದಂತೆಯೇ ಆತ ಪರಾರಿಯಾಗಿದ್ದಾನೆ. ಈ ವೇಳೆ ಸುಮಾರು 30 ಕೆ.ಜಿ. ತೂಕದ ಚರ್ಮ ಸಹಿತ 9,000 ರೂ ಮೌಲ್ಯದ ದನದ ಮಾಂಸ, 2 ಮಚ್ಚು, ದನದ ಮಾಂಸ ಕಡಿಯಲು ಉಪಯೋಗಿಸಿದ 2 ಅಡಿ ಎತ್ತರದ 1 ಮರದ ದಪ್ಪದ ತುಂಡು ಪತ್ತೆಯಾಗಿದೆ.
ಆರೋಪಿತನು ಅಕ್ರಮವಾಗಿ ಹಣ ಮಾಡುವ ಉದ್ದೇಶದಿಂದ ಜಾನುವಾರನ್ನು ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಬಂದು ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ವಧೆ ಮಾಡಿ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಈ ಕೃತ್ಯ ನಡೆಸುತ್ತಿದ್ದ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.