ಮಣಿಪಾಲ: ಕೋವಿಡ್ ನಿಯಂತ್ರಣಕ್ಕೆ ತಂದ ಕ್ರಮದ ಕುರಿತು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತ

ಉಡುಪಿ,ಏ 17(ಉಡುಪಿ ಟೈಮ್ಸ್ ವರದಿ): ಮಣಿಪಾಲದಲ್ಲಿ ಕೋವಿಡ್ ನಿಯಂತ್ರಣಕ್ಕೆ ತಂದ ಕ್ರಮದ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಕೋವಿಡ್ 2 ಅಲೆ ಯನ್ನು ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತಂತೆ ನಡೆದ ಜಿಲ್ಲಾ ತಜ್ಞರ ಸಮಿತಿ ಸಭೆಯುಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಮಾಹಿತಿ ನೀಡಿದ್ದು, ಏ.1 ರಿಂದ ಮಣಿಪಾಲದಲ್ಲಿ ಯಾವುದೇ ಕೊರೋನಾ ಪ್ರಕರಣ ಪತ್ತೆಯಾಗಿಲ್ಲ. ಕಂಟೈನ್ಮೆಂಟ್ ಘೋಷಣೆಯಾದ 15 ದಿನಗಳಲ್ಲಿ ಎಂಐಟಿ ಸೋಂಕು ಮುಕ್ತ ವಾಗಿದ್ದು, ಎಂಐಟಿ ಯಲ್ಲಿ ಕಂಟೈನ್ಮೆಂಟ್ ಝೋನ್ ರಚಿಸಿ ಕೋವಿಡ್ ನಿಯಂತ್ರಣಕ್ಕೆ ತಂದ ಕ್ರಮದ ಕುರಿತು ಪ್ರಧಾನ ಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿಯೂ ಕೋವಿಡ್ ಹೆಚ್ಚು ಹರಡುತ್ತಿದೆ, ಇದನ್ನು ನಿಯಂತ್ರಿಸುವ ಕುರಿತಂತೆ ಜಿಲ್ಲೆಯಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ತಪಾಸಣೆ, ಪತ್ತೆ ಹಚ್ಚುವಿಕೆ, ಚಿಕಿತ್ಸೆ ನೀಡುವುದನ್ನು ಶೀಘ್ರವಾಗಿ ಕೈಗೊಳ್ಳಬೇಕು, ಹೃದಯ ಸಂಬಂಧಿ ರೋಗಿಗಳು, ಕಿಡ್ನಿ ಸಮಸ್ಯೆಯಿರುವವರು, ಕ್ಯಾನ್ಸರ್ ರೋಗಿಗಳು ಕೋವಿಡ್ ನಿಂದ ಮರಣ ಹೊಂದುವುದು ಅಧಿಕವಾಗಿದ್ದು, ಇಂತಹ ರೋಗಿಗಳನ್ನು 15 ದಿನಗಳಿಗೊಮ್ಮೆ ನಿಯಮಿತವಾಗಿ ತಪಾಸಣೆ ಮಾಡುವುದರ ಮೂಲಕ ಬೇಗ ರೋಗ ಪತ್ತೆ ಹಚ್ಚಿ ಚಕಿತ್ಸೆ ನೀಡುವುದರಿಂದ ಸೋಂಕಿನಿಂದ ಸಾವು ಸಂಭವಿಸುವುದನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸಲು ಅಗತ್ಯವಿರುವ ರೆಮಿಡಿಸಿವರ್ ಚುಚ್ಚುಮದ್ದಿನ ಬಳಕೆಯನ್ನು ಎಚ್ಚರಿಕೆಯಿಂದ ಬಳಸಬೇಕು, ಕೋವಿಡ್ ಲಸಿಕೆ, ಮಾಸ್ಕ್ ಗಳು, ಪಿಪಿಇ ಕಿಟ್, ಆಕ್ಸಿಜಿನ್ ಕೊರತೆಯಾಗದಂತೆ ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಹೊಂದಿರಬೇಕು ಎಂದು ಸಮಿತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಯಿತು. ಇದೇ ವೇಳೆ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಕೋವಿಡ್ ಸೊಂಕಿಗೆ ಒಳಗಾಗದಂತೆ ಆಸ್ಪತ್ರೆಗಳಲ್ಲಿ ಇನ್ಫೆಕ್ಷನ್ ಕಂಟ್ರೋಲ್ ಮಾಡುವ ಕುರಿತು ತರಬೇತಿ ನೀಡಬೇಕು ಎಂದು ತಜ್ಞರ ಸಮಿತಿ ತಿಳಿಸಿತು.

ಈ ವೇಳೆ ಮಾತು ಮುಂದುವರೆಸಿದ ಜಿಲ್ಲಾಧಿಕಾರಿ ಅವರು, “ಕೋವಿಡ್ ನಿಯಂತಣ ಕ್ರಮಗಳನ್ನುಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ಸರ್ಕಾರದ ಸೂಚನೆಯಂತೆ ಅಗತ್ಯ ಪ್ರಮಾಣದ ಬೆಡ್ ಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಬೇಕು, ತಮ್ಮಲ್ಲಿಗೆ ಬರುವ ಐಎಲ್ ಐ ಮತ್ತು ಸಾರಿ ಪ್ರಕರಣಗಳ ಕುರಿತು ಮಾಹಿತಿ ನೀಡಬೇಕು, ಎಲ್ಲಾ ಖಾಸಗಿ ಸಂಸ್ಥೆಗಳು,ಮಾಲ್ ಗಳು, ಶಿಕ್ಷಣ ಸಂಸ್ಥೆಗಳು, ಹೋಟೆಲ್ ಗಳು, ಸೇರಿದಂತೆ ಎಲ್ಲಡೆ ಕೋವಿಡ್ ಪರೀಕ್ಷೆ ನಡೆಸಲು ಅಗತ್ಯ ಸಹಕಾರ ನೀಡಬೇಕು ಇಲ್ಲವಾದಲ್ಲಿ ಅಂತಹವರ ವಿರುದ್ದ ಎಮಿಡಮಿಕ್ ಕಾಯಿದೆ ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು” ಎಂದು ಎಚ್ಚರಿಸಿದರು.

Leave a Reply

Your email address will not be published. Required fields are marked *

error: Content is protected !!