ಉಡುಪಿ: ನಗರದ ಒಳಚರಂಡಿ ಮೇಲ್ದರ್ಜೆಗೆ 250 ಕೋ.ರೂ‌. ವೆಚ್ಚದ ಡಿಪಿಆರ್ ಸಿದ್ದ

ಉಡುಪಿ, ಎ.16(ಉಡುಪಿ ಟೈಮ್ಸ್ ವರದಿ): ನಗರದೊಳಗಿನ ಯುಜಿಡಿ’ ಪುನರ್ ವಿನ್ಯಾಸದ ಡಿಪಿಆರ್ ಬಗ್ಗೆ ವಿಶೇಷ ಸಭೆ  ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಇಂದು ನಡೆಯಿತು. 

ಸಭೆಯಲ್ಲಿ ಮಂಡಳಿ ಕಾರ್ಯನಿರ್ವಹಕ ಎಂಜಿನಿಯರ್ ಚಂದ್ರಶೇಖರ್ ಅವರು ಯೋಜನೆ ಬಗ್ಗೆ  ಮಾಹಿತಿ ನೀಡಿ, ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ವತಿಯಿಂದ ನಗರ ವ್ಯಾಪ್ತಿ ಒಳಚರಂಡಿ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲು 250 ಕೋಟಿ ರೂ‌ ವೆಚ್ಚದ ಡಿಪಿಆರ್ ಸಿದ್ದಪಡಿಸಲಾಗಿದೆ. ಸರ್ವೇಯನ್ನು ಪೂರ್ಣಗೊಳಿಸಲಾಗಿದ್ದು, ಯೊಜನಾ ವರದಿಯಲ್ಲಿ ಕೆಲವು ಸೂಕ್ಷ್ಮ ಬದಲಾವಣೆ ಮಾಡಿದ  ಬಳಿಕ ಡಿಪಿಆರ್ ಅಂತಿಮಗೊಳಿಸಲಾಗುತ್ತದೆ. ಬಳಿಕ ಮಂಡಳಿಯ ತಾಂತ್ರಿಕ ಸಮಿತಿ ಇದಕ್ಕೆ ಅನುಮೋದನೆ ನೀಡಬೇಕಿದೆ ಎಂದರು. 

ಈ ವೇಳೆ ಮಂಡಳಿ ಇಂಜಿನಿಯರ್ ಚಂದ್ರಶೇಖರ್ ಅವರು ಮಾಹಿತಿ ನೀಡಿ ಹಿಂದಿನ ಯುಜಿಡಿ ಪೈಪ್‌ಲೈನ್ 8 ಮೀಟರ್ ಆಳದಲ್ಲಿ ಆಳವಡಿಸಲಾಗಿದ್ದು, ಇದು ಅವೈಜ್ಞಾನಿಕ ಕ್ರಮವಾಗಿದೆ. ಇದರಿಂದ ನಿರ್ವಹಣೆ ಮತ್ತು ದುರಸ್ತಿಗೆ ಸಮಸ್ಯೆ ಉದ್ಬವಾಗುತ್ತದೆ. ಆದ್ದರಿಂದ ಹೊಸ ವ್ಯವಸ್ಥೆಯಲ್ಲಿ 4 ಮೀಟರ್ ಆಳದಲ್ಲಿ ಪೈಪ್‌ಲೈನ್ ಆಳವಡಿಸಲಾಗುತ್ತದೆ. ಒತ್ತಡಕ್ಕೆ ಅನುಗುಣವಾಗಿ ಪೈಪ್‌ಲೈನ್ ಗಾತ್ರಗಳನ್ನು ಹಾಕಲಾಗುತ್ತದೆ ಎಂದು  ವಿವರಿಸಿದರು. ಮಠದಬೆಟ್ಟು, ಕಿನ್ನಿಮೂಲ್ಕಿ, ಕಪ್ಪೆಟ್ಟು ವೆಟ್‌ವೆಲ್ ಪ್ರದೇಶದಲ್ಲಿ ವೆಟ್‌ವೆಲ್ ಮೇಲ್ದರ್ಜೆಗೇರಿಸಲಾಗುತ್ತದೆ. ಕರಾವಳಿ ಸಮೀಪದ ವೆಟ್‌ವೆಲ್‌ ನಲ್ಲಿ ಒತ್ತಡ ಹೆಚ್ಚಿರುವ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲು ನಿಟ್ಟೂರು ಸಮೀಪದ ಸೇತುವೆ ಬಳಿ ಹೊಸ ವೆಟ್‌ವೆಲ್ ಹಾಗೂ ಮಲ್ಪೆ ರಸ್ತೆಯ ಸಮೀಪದಲ್ಲಿ ಹೊಸದಾಗಿ ಎರಡು ವೆಟ್‌ವೆಲ್ ನಿರ್ಮಿಸಲಾಗುತ್ತದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

ಶಾಸಕ ಕೆ.ರಘುಪತಿ ಭಟ್ ಅವರು ಮಾತನಾಡಿ, ಬಜೆಟ್‌ನಲ್ಲಿ ಯುಜಿಡಿ ಕಾಮಗಾರಿಗಾಗಿ ಸರ್ಕಾರ ಅನುದಾನ ನಿಗದಿಪಡಿಸಿದ್ದು, ಉಡುಪಿ ನಗರಸಭೆ ಯುಜಿಡಿ ಪುನಶ್ಚೇತನಕ್ಕೆ ಬಜೆಟ್‌ನಿಂದ ಅನುದಾನ ಪಡೆಯಲಾಗುವುದು ಎಂದರು . ಇದೇ ವೇಳೆ ಶೀಘ್ರ ಡಿಪಿಆರ್ ಪೂರ್ಣಗೊಳಿಸಿ, ತಾಂತ್ರಿಕ ಸಮಿತಿಯಲ್ಲಿ ಅನುಮೋದನೆಯಾಗುವಂತೆ ಮಂಡಳಿ ಇಂಜಿನಿಯರ್‌ಗಳಿಗೆ ಸೂಚನೆ ನೀಡಿದರು. 

ಈ ಸಂದರ್ಭ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ವಿಪಕ್ಷ ನಾಯಕ ರಮೇಶ್ ಕಾಂಚನ್, ಪೌರಾಯುಕ್ತ ಉದಯ ಶೆಟ್ಟಿ, ನಗರಸಭೆ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!