ವಾರಾಹಿ ನದಿಯಲ್ಲಿ ಅಕ್ರಮ ಮರಳುಗಾರಿಕೆ- ತಡೆಗಟ್ಟಲು ಕಟ್ಟುನಿಟ್ಟಿನ ಸೂಚನೆ

ಉಡುಪಿ, ಎ.16 (ಉಡುಪಿ ಟೈಮ್ಸ್ ವರದಿ) : ಅಕ್ರಮ ಮರಳುಗಾರಿಕೆ ತಡೆಗಟ್ಟುವ ಕುರಿತು ಕ್ರಮ ಕೈಗೊಳ್ಳುವ ಸಲುವಾಗಿ ಎ.15 ರಂದು ಪೊಲೀಸ್ ಅಧಿಕಾರಿಗಳಿಂದ ಬ್ರಹ್ಮಾವರ ವೃತ್ತ ಕಛೇರಿಯಲ್ಲಿ  ಸಭೆ ನಡೆಸಲಾಯಿತು.

ಕೋಟ ಪೊಲೀಸ್ ಠಾಣಾ ಸರಹದ್ದಿನ ಮೊಳಹಳ್ಳಿ ಗ್ರಾಮದ ಮರತ್ತೂರು, ಕೋಣಿಹರ ಮತ್ತು ಕೈಲ್ಕರ ಎಂಬಲ್ಲಿ ಯಾವುದೇ ಪರವಾನಿಗೆ ಪಡೆಯದೇ ವಾರಾಹಿ ನದಿಯಿಂದ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆ ದೂರು ಬಂದ  ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್ ವಿಷ್ಣುವರ್ಧನ್ ರವರ ಅಧ್ಯಕ್ಷತೆಯಲ್ಲಿ ಮೊಳಹಳ್ಳಿ ಗ್ರಾಮದ ಪಂಚಾಯತ್‍ನ ಅಭಿವೃದ್ಧಿ ಅಧಿಕಾರಿಯಾದ ಭಾವನಾ, ಗ್ರಾಮ ಕರಣಿಕ ಅನಿಲ್ ಕುಮಾರ್, ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಸದಾನಂದ ಎಸ್. ನಾಯ್ಕ, ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಕೋಟ ಠಾಣಾ ಪಿ.ಎಸ್.ಐ ಪುಷ್ಪಾ, ಬ್ರಹ್ಮಾವರ ಠಾಣಾ ಪಿ.ಎಸ್.ಐ ಗುರುನಾಥ ಹಾದಿಮನಿ ರವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.

ಈ ಸಭೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಸ್ಥಳಗಳಾದ ಮೊಳಹಳ್ಳಿ ಗ್ರಾಮದ ಮರತ್ತೂರು, ಕೋಣಿಹರ ಮತ್ತು ಕೈಲ್ಕರ ಎಂಬಲ್ಲಿ ಜಂಟಿಯಾಗಿ ಚೆಕ್ ಪೋಸ್ಟ್ ರಚನೆ ಮಾಡುವುದು. ಹೊರರಾಜ್ಯದಿಂದ ಬಂದಿರುವ ಕೂಲಿ ಕಾರ್ಮಿಕರು ಪಂಚಾಯತ್ ವ್ಯಾಪ್ತಿಯಲ್ಲಿ ಶೆಡ್ ನಿರ್ಮಿಸದಂತೆ ಕ್ರಮ ಕೈಗೊಳ್ಳುವುದು. ಕಂದಾಯ, ಪಂಚಾಯತ್, ಗಣಿ ಮತ್ತು ಭೂವಿಜ್ಞಾನ ಹಾಗೂ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅಕ್ರಮ ಮರಳುಗಾರಿಕೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮತ್ತು ಅಕ್ರಮ ಮರಳುಗಾರಿಕೆಯನ್ನು ತಡೆಗಟ್ಟುವ ಬಗ್ಗೆ ಕಟ್ಟು ನಿಟ್ಟಿನ ಸೂಚನೆ ಹಾಗೂ ಸೂಕ್ತ ನಿರ್ದೇಶನಗಳನ್ನು ನೀಡಲಾಯಿತು.

Leave a Reply

Your email address will not be published. Required fields are marked *

error: Content is protected !!