ಮಿತಿಮೀರುತ್ತಿರುವ ಸೋಂಕು: ಶಾಲಾ-ಕಾಲೇಜು,ಚಿತ್ರಮಂದಿರ, ಹೆಚ್ಚು ಜನ ಸೇರುವ ಕಾರ್ಯಕ್ರಮ ನಿಷೇಧಕ್ಕೆ ಸಮಿತಿ ಶಿಫಾರಸ್ಸು
ಬೆಂಗಳೂರು, ಎ.16 : ರಾಜ್ಯದಲ್ಲಿ ಮಿತಿಮೀರಿ ಹರಡುತ್ತಿರುವ ಕೊರೋನಾ ತಡೆಗಟ್ಟಲು ರಾಜ್ಯಾದ್ಯಂತ 144 ಸೆಕ್ಷನ್ ಜಾರಿ ಮಾಡುವಂತೆ ಸರಕಾರಕ್ಕೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಮಾಡಿದೆ ಎಂದು ವರದಿಯಾಗಿದೆ.
ಈ ಸಮಿತಿಯು ಸರಕಾರಕ್ಕೆ ಕೊರೊನಾ ನಿಯಂತ್ರಣದ ಸಲುವಾಗಿ ಶಾಲಾ – ಕಾಲೇಜು, ಚಿತ್ರಮಂದಿರ ಬಂದ್ ಮಾಡಲು ಹಾಗೂ ಹೆಚ್ಚು ಜನ ಸೇರುವ ಕಾರ್ಯಕ್ರಮಗಳೆಲ್ಲಾವನ್ನು ನಿಷೇಧಗೊಳಿಸಲು ಸಲಹೆ ನೀಡಿದ್ದಾರೆ. ಅಲ್ಲದೆ ಬಾರ್ಬರ್ ಶಾಪ್, ಪಬ್ ದೇವಸ್ಥಾನ ಚರ್ಚ್ ಮಸೀದಿ ಸೇರಿದಂತೆ ಧಾರ್ಮಿಕ ಕೇಂದ್ರ, ಮಾರುಕಟ್ಟೆ ಹೀಗೆ ಜನ ಸೇರುವ ಪ್ರದೇಶಗಳನ್ನು ಮುಚ್ಚುವಂತೆ ಶಿಫಾರಸ್ಸು ಮಾಡಿದೆ. ಇನ್ನು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ನೀಡಿದ ಶಿಫಾರಸ್ಸುಗಳ ಬಗ್ಗೆ ಮುಖ್ಯಮಂತ್ರಿಗಳು ತುರ್ತು ಸಭೆಯಲ್ಲಿ ಚರ್ಚಿಸಿ ಕಠಿಣ ಕ್ರಮ ಜಾರಿಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಾವೇರಿ ನಿವಾಸದಲ್ಲಿ ಇಂದು ತುರ್ತು ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಸಚಿವರು, ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದು, ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಜಾರಿಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.