ರಾಮಮಂದಿರ ದೇಣಿಗೆ ಸಂಗ್ರಹ: ಬರೋಬ್ಬರಿ 22 ಕೋಟಿ ಮೊತ್ತದ 15 ಸಾವಿರ ಚೆಕ್ಗಳ ಬೌನ್ಸ್!
ಅಯೋಧ್ಯೆ: ರಾಮ ದೇವಾಲಯದ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್ ಸಂಗ್ರಹಿಸಿದ 22 ಕೋಟಿ ರೂ.ಗಳ ಮುಖಬೆಲೆಯ ಸುಮಾರು 15 ಸಾವಿರ ಬ್ಯಾಂಕ್ ಚೆಕ್ ಬೌನ್ಸ್ ಆಗಿದೆ.
ದೇವಾಲಯದ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಸ್ಥಾಪಿಸಿದ್ದ ಟ್ರಸ್ಟ್ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರದ ಲೆಕ್ಕಪರಿಶೋಧನಾ ವರದಿಯ ಪ್ರಕಾರ, ಬ್ಯಾಂಕ್ ಖಾತೆಗಳಲ್ಲಿ ಹಣದ ಕೊರತೆ ಅಥವಾ ಕೆಲವು ತಾಂತ್ರಿಕ ದೋಷದಿಂದಾಗಿ ಚೆಕ್ಗಳು ಬೌನ್ಸ್ ಆಗಿವೆ ಎಂದು ಹೇಳಿದೆ.
ತಾಂತ್ರಿಕ ದೋಷಗಳ ಸಮಸ್ಯೆಯನ್ನು ಪರಿಹರಿಸಲು ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಅವರು ಮತ್ತೆ ದೇಣಿಗೆ ನೀಡುವಂತೆ ಜನರನ್ನು ಕೇಳುತ್ತಿದ್ದಾರೆ ಎಂದು ಟ್ರಸ್ಟ್ ಸದಸ್ಯ ಡಾ.ಅನಿಲ್ ಮಿಶ್ರಾ ಹೇಳಿದರು. ಬೌನ್ಸ್ ಆಗಿರುವ ಚೆಕ್ ಗಳ ಪೈಕಿ ಸುಮಾರು 2,000 ಅಯೋಧ್ಯೆಯಿಂದಲೇ ಸಂಗ್ರಹಿಸಲಾಗಿತ್ತು.
ಜನವರಿ 15ರಿಂದ ಆರಂಭವಾಗಿದ್ದ ದೇಣಿಗೆ ಸಂಗ್ರಹ ಅಭಿಯಾನದಲ್ಲಿ ಫೆಬ್ರವರಿ 17ರ ನಡುವೆ ದೇಶಾದ್ಯಂತ ವಿಶ್ವ ಹಿಂದೂ ಪರಿಷತ್(ವಿಎಚ್ಪಿ) ಅಪಾರ ಪ್ರಮಾಣದಲ್ಲಿ ದೇಣಿಗೆ ಸಂಗ್ರಹಿಸಿತ್ತು.
ಅಂತಿಮ ಅಂಕಿ ಅಂಶಗಳನ್ನು ಟ್ರಸ್ಟ್ ಇನ್ನೂ ಘೋಷಿಸದಿದ್ದರೂ ಸುಮಾರು 5,000 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಹೇಳಲಾಗುತ್ತಿದೆ.