ಕನಕಪುರದಲ್ಲಿ ಕಳ್ಳ ಮಾಲು ಮಾರುತ್ತಿದ್ದ ಮಹಾನಾಯಕನ ಸಂಪತ್ತಿನ ಮೂಲ ಹುಡುಕುವಿರಾ: ಬಿಜೆಪಿ ಟ್ವೀಟ್
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಷ್ಟೊಂದು ಧನ ಸಂಪಾದಿಸಿದ್ದು ಹೇಗೆ? ಕನಕಪುರದಲ್ಲಿ ಕಳ್ಳ ಮಾಲು ಮಾರುತ್ತಿದ್ದ ಮಹಾನಾಯಕನ ಸಂಪತ್ತಿನ ಮೂಲ ಹುಡುಕುವಿರಾ ಎಂದು ಬಿಜೆಪಿ ಪ್ರಶ್ನೆ ಮಾಡಿದೆ. ಬಿಜೆಪಿ ಶಾಸಕ ಸಿ.ಟಿ. ರವಿ ಅವರು ಕೋಟ್ಯಂತರ ಬೆಲೆಯ ಆಸ್ತಿ ಸಂಗ್ರಹಿಸಿದ್ದು ಹೇಗೆ ಎಂದು ಕೆಪಿಸಿಸಿ ಪ್ರಶ್ನಿಸಿದ ಬೆನ್ನಲ್ಲೇ ಬಿಜೆಪಿ ಸರಣಿ ಟ್ವಿಟ್ ಮೂಲಕ ತಿರುಗೇಟು ನೀಡಿದೆ.
ಕಾಂಗ್ರೆಸ್ ಪಕ್ಷಕ್ಕೆ ಕಾಮಾಲೆ ರೋಗ ಬಾಧಿಸುತ್ತಿದೆ. ರಾಬರ್ಟ್ ವಾದ್ರಾ, ಸೋನಿಯಾ ಗಾಂಧಿ, ಚಿದಂಬರಂ, ಡಿ.ಕೆ.ಶಿ, ಖರ್ಗೆ ಅವರ ಖಜಾನೆ ತುಂಬಿದ್ದು ಹೇಗೆ ಎಂದು ಪ್ರಶ್ನಿಸುವ ಧೈರ್ಯವನ್ನು ಕಾಂಗ್ರೆಸ್ ತೋರಬೇಕು. ಕನಕಪುರದಲ್ಲಿ ಕಳ್ಳ ಮಾಲು ಮಾರುತ್ತಿದ್ದ ಮಹಾನಾಯಕನ ಸಂಪತ್ತಿನ ಮೂಲ ಹುಡುಕುವಿರಾ!? ಎಂದು ಪ್ರಶ್ನಿಸಿದೆ.
ಕನಕಪುರದಲ್ಲಿ ಕಳ್ಳ ವಹಿವಾಟು ನಡೆಸುತ್ತಿದ್ದ ಭ್ರಷ್ಟಾಚಾರ ಆರೋಪಿಯ ಘೋಷಿತ ಆಸ್ತಿಯೇ 840 ಕೋಟಿ. 2013ರಿಂದ 2018ರ ಅವಧಿಯಲ್ಲಿ ತನ್ನ ಆಸ್ತಿ 600 ಕೋಟಿ ವೃದ್ಧಿಸಿದೆ ಎಂದು ಮಹಾನಾಯಕ ಹೇಳಿಕೊಂಡಿದ್ದರು. ಇಂಧನದಲ್ಲಿ ಇಷ್ಟೊಂದು ಧನ ಸಂಪಾದಿಸಿದ್ದು ಹೇಗೆ ಎಂದು ಕನಕಪುರದ ಮಹಾನಾಯಕನ ಪ್ರಶ್ನಿಸಿ ಎಂದು ಕಾಂಗ್ರೆಸ್‌ಗೆ ಹೇಳಿದೆ.
ಮಜವಾದಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 600 ಕೋಟಿ ಸಂಪತ್ತು ಹೆಚ್ಚಾಗಿದೆ ಎಂದು ಡಿ.ಕೆ. ಶಿವಕುಮಾರ್ ಘೋಷಿಸಿಕೊಂಡಿದ್ದರು. ಹಾಗಾದರೆ ಉಳಿದ ಕುಖ್ಯಾತರಾದ ಜಾರ್ಜ್, ಮಹಾದೇವಪ್ಪ, ಎಂ.ಬಿ.ಪಾಟೀಲ್ ಮೊದಲಾದವರ ಲೂಟಿ ಎಷ್ಟು? ಎಂಎಲ್‌ಸಿ ಗೋವಿಂದರಾಜ್ ಐಟಿ ಡೈರಿಯನ್ನು ಒಮ್ಮೆ ಬಿಚ್ಚಿಸಿಡುವಿರಾ ಕಾಂಗ್ರೆಸ್ ? ಎಂದು ಸವಾಲು ಹಾಕಿದೆ.
ಈ ಮೊದಲು ಟ್ವೀಟ್ ಮಾಡಿದ್ದ ಕರ್ನಾಟಕ ಕಾಂಗ್ರೆಸ್, ಚಿಕ್ಕಮಗಳೂರಿನಲ್ಲಿ ಅಬ್ಬೇಪಾರಿಯಂತೆ ತಿರುಗುತ್ತಿದ್ದ ಸಿ.ಟಿ. ರವಿ ಎನ್ನುವ ಮತಿಗೆಟ್ಟ ಅಸಾಮಿಯ ಖಜಾನೆ ಕೆಲವೇ ವರ್ಷದಲ್ಲಿ ತುಂಬಿದ್ದು ಹೇಗೆ? ಬೆಂಗಳೂರು, ಚಿಕ್ಕಮಗಳೂರಿನಲ್ಲಿ ಕೋಟ್ಯಾಂತರ ಬೆಲೆಯ ಆಸ್ತಿ ಬಂದಿದ್ದು ಹೇಗೆ? ಲೋಕಾಯುಕ್ತ ಕೋರ್ಟಿನಲ್ಲಿ 409,420, 120, 463, 466, 120B ಪ್ರಕರಣಗಳು ಇರುವುದೇಕೆ? ಲೂಟಿ ರವಿ ಉತ್ತರಿಸುವರೇ? ಎಂದು ಟ್ವೀಟ್ ಮಾಡಿತ್ತು.