ಸಾರಿಗೆ ನೌಕರರ ಮುಷ್ಕರ: ಬೈಂದೂರಿನಲ್ಲಿ ಬಸ್ ಗೆ ಕಲ್ಲು ತೂರಾಟ!
ಬೈಂದೂರು : ಸಾರಿಗೆ ನೌಕರರ ಮುಷ್ಕರ ನಡೆಯುತ್ತಿರುವ ಸಂದರ್ಬ ಕರ್ತವ್ಯಕ್ಕೆ ಹಾಜರಾಗಿದ್ದಕ್ಕಾಗಿ ನೌಕರರೊಬ್ಬರು ಚಲಾಯಿಸುತ್ತಿದ್ದ ಬಸ್ ಮೇಲೆ ಇತರ ಸಾರಿಗೆ ನೌಕರರು ಕಲ್ಲು ತೂರಾಟ ನಡೆಸಿರುವ ಘಟನೆ ಬೈಂದೂರಿನ ಶಿರೂರು ಗ್ರಾಮದ ರೈಲ್ವೇ ಟನೆಲ್ ಬಳಿ ನಡೆದಿದೆ.
ಈ ಬಗ್ಗೆ ಕೆ ಎಸ್ ಅರ್ಟಿಸಿ ಬಸ್ ಚಾಲಕ ರಾಘವೇಂದ್ರ ಎನ್ ಅವರು ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅವರು ನೀಡಿರುವ ದೂರಿನ ಪ್ರಕಾರ, ಕಳೆದ ಕೆಲ ದಿನಗಳಿಂದ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿದೆ. ಆದ್ದರಿಂದ ಏ.13 ರಂದು ರಾಘವೇಂದ್ರ ಎನ್ ರವರು ಚಾಲಕನಾಗಿ ಮತ್ತು ಅಶೋಕ ರವರು ನಿರ್ವಾಹಕರಾಗಿ ಮೇಲಾಧಿಕಾರಿಗಳ ಸಲಹೆಯಂತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಅವರು, ಮಧ್ಯಾಹ್ನದ ವೇಳೆಗೆ ಕುಂದಾಪುರದಿಂದ ಭಟ್ಕಳಕ್ಕೆ ಹೊರಟು ಬಳಿಕ ಮಧ್ಯಾಹ್ನ 3:55 ರ ಸುಮಾರಿಗೆ ಬೈಂದೂರಿನ ಶಿರೂರು ಗ್ರಾಮದ ರೈಲ್ವೇ ಟನೆಲ್ ಬಳಿ ಚಲಿಸುತ್ತಿರುವಾಗ ಆರೋಪಿಗಳಾದ ನಾಗೇಶ, ಸುರೇಂದ್ರ ಮತ್ತು ಇತರ ಇಬ್ಬರು ಬೈಕ್ ನಲ್ಲಿ ಬಂದು ರಸ್ತೆಯಲ್ಲಿ ಬಸ್ಸಿಗೆ ಬೈಕ್ ನ್ನು ಅಡ್ಡವಿಟ್ಟು ಮುಂದೆ ಹೋಗದಂತೆ ತಡೆದಿದ್ದಾರೆ.
ಈ ವೇಳೆ ಆರೋಪಿತ ನಾಗೇಶ ಹಾಗೂ ಸುರೇಂದ್ರ ರವರು ಕೆಎಸ್ ಆರ್ ಟಿಸಿ ಸಿಬ್ಬಂದಿಯವರ ಮುಷ್ಕರ ನಡೆಯುತ್ತಿರುವಾಗ ನೀವು ಯಾಕೆ ಕರ್ತವ್ಯಕ್ಕೆ ಬಂದಿದ್ದು, ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ನಿಮ್ಮ ಕೈ ಕಾಲುಗಳನ್ನು ಮುರಿದು ಹಾಕುತ್ತೇವೆ ಎಂದು ಹೆದರಿಸಿದ್ದಾರೆ. ಅಲ್ಲದೆ ನಾಗೇಶ ಮತ್ತು ಸುರೇಂದ್ರ ರವರು ರಸ್ತೆಯ ಬದಿಯಲ್ಲಿರುವ ಕಲ್ಲುಗಳನ್ನು ಬಸ್ಸಿನ ಎದುರಿನ ಗ್ಲಾಸಿಗೆ ಹೊಡೆದು ಜಖಂ ಗೊಳಿಸಿದ್ದಾರೆ. ಘಟನೆಯಿಂದ ಸಂಸ್ಥೆಗೆ ಸುಮಾರು 10 ಸಾವಿರ ರೂ. ನಷ್ಟ ಉಂಟಾಗಿದೆ. ಆರೋಪಿಗಳು ಕೂಡಾ ಸಾರಿಗೆ ನೌಕರರಾಗಿದ್ದು, ಮುಷ್ಕರ ನಡೆಯುತ್ತಿರುವ ಸಂದರ್ಭದಲ್ಲಿ ರಾಘವೇಂದ್ರ ಎನ್ ರವರು ಕರ್ತವ್ಯ ನಿರ್ವಹಿಸುತ್ತಿದ್ದುದರಿಂದ, ಮುಷ್ಕರ ಇರುವ ಸಮಯ ರಾಘವೇಂದ್ರ ಎನ್ ರವರು ಕರ್ತವ್ಯ ನಿರ್ವಹಿಸಬಾರದು ಎಂಬ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.