ಜಲ ಸಂಪನ್ಮೂಲ ರಕ್ಷಣೆಗಾಗಿ ಸೈಂಟ್ ಮೇರೀಸ್ ದ್ವೀಪದಿಂದ ಮಲ್ಪೆ ದಡಕ್ಕೆ ಈಜಿದ ಕರಂಬಳ್ಳಿ ಸ್ವಿಮ್ಮರ್ಸ್

ಉಡುಪಿ ಎ.14 (ಉಡುಪಿ ಟೈಮ್ಸ್ ವರದಿ): ನಿರಂತರ ಪರಿಸರ ರಕ್ಷಣೆಯ ಸಂದೇಶ ಸಾರುವ ಕೆಲಸವನ್ನು ಮಾಡುವ ಹವ್ಯಾಸಿ ಈಜುಗಾರರ ಕರಂಬಳ್ಳಿ ಸ್ವಿಮ್ಮರ್ಸ್ ತಂಡ ಈ ಬಾರಿ ಸೈಂಟ್ ಮೇರೀಸ್ ದ್ವೀಪದಿಂದ  ಮಲ್ಪೆ ಕಡಲ ಕಿನಾರೆಯವರೆಗೆ ಈಜಿ ಬರುವ ಮೂಲಕ ವಿನೂತನವಾಗಿ ಜಲ ಸಂಪನ್ಮೂಲ ರಕ್ಷಣೆಯ ಸಂದೇಶ ಸಾರಿದೆ. ಉಡುಪಿಯ ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಕೆರೆಯಲ್ಲಿ ನಿತ್ಯ ಈಜುವ ಹವ್ಯಾಸಿ ಈಜುಗಾರರ ತಂಡದ 15 ಮಂದಿ ಸದಸ್ಯರು ಸಮುದ್ರಕ್ಕೆ ಕಸ, ಕಲ್ಮಶ ಎಸೆಯದೆ ಜಲ ಸಂಪನ್ಮೂಲವನ್ನು ರಕ್ಷಿಸುವ, ಪರಿಸರ ರಕ್ಷಣೆಯ ಸಂದೇಶ ಸಾರಲು ಇಂದು ಮುಂಜಾನೆ ಸೈಂಟ್ ಮೇರೀಸ್ ದ್ವೀಪದಿಂದ ಮಲ್ಪೆ ಕಡಲ ಕಿನಾರೆಯವರೆಗೆ ಈಜಿ ಬಂದಿದ್ದಾರೆ.

ಇಂದಿನ ಈ ಕಾರ್ಯದಲ್ಲಿ ಈ ತಂಡದ ಹವ್ಯಾಸಿ ಈಜುಗಾರರಾದ ಆರ್. ಕೆ ರಮೇಶ್ ಪೂಜಾರಿ ನೇತ್ರತ್ವದ ತಂಡದಲ್ಲಿ ಪ್ರಕಾಶ್ ಜೋಗಿ, ನಿತ್ಯಾನಂದ ಜೋಗಿ, ಪ್ರಶಾಂತ್, ವಿಜಯರಾಜ್, ಕೇಶವ ಗೌಡ, ಆನಂದ ಹೊಳ್ಳ, ಲೋಕೇಶ ಪಾಲನ್, ದಿನೇಶ್ ಜತ್ತನ್, ಸಾತ್ವಿಕ್ ಜತ್ತನ್, ಮಿಥುನ್, ಸತೀಶ್ ಪೂಜಾರಿ, ಗೋಪಾಲ ಪಾಲನ್, ದೀಪಕ್ ಶೇಟ್, ವಿಘ್ನೇಷ್ ಆಚಾರ್ಯ ಭಾಗವಹಿಸಿದ್ದು, ಇವರು 3.09 ಕಿ.ಮೀ ದೂರವನ್ನು 2.45 ಗಂಟೆಯಲ್ಲಿ ಈಜಿ ದಡ ಸೇರಿದ್ದಾರೆ.

ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ಬೆಳಿಗ್ಗೆ ಮತ್ತು ಸಂಜೆ ಈಜಾಡುವ, ಆಸಕ್ತರಿಗೆ ಈಜು ಕಲಿಸುವ ಈ ತಂಡದಲ್ಲಿ ನಾಲ್ಕು ವರ್ಷದ ಪುಟಾಣಿಗಳಿಂದ ಹಿಡಿದು 70 ವರ್ಷದ ಹಿರಿಯರೂ ಜೊತೆಗಿದ್ದಾರೆ. ಎಲ್ಲರಿಗೂ ಉಚಿತ ತರಬೇತಿ, ಈಜಿನ ಜೊತೆಗೆ ಕೆರೆಯ ಸ್ವಚ್ಛತೆ, ನೀರು, ಪರಿಸರದ ಸಂರಕ್ಷಣೆಯ ಸಂದೇಶ ಸಾರುವ ಕೆಲಸವನ್ನು ಈ ತಂಡ ನಿರಂತರವಾಗಿ ಮಾಡುತ್ತಾ ಬಂದಿದೆ.

Leave a Reply

Your email address will not be published. Required fields are marked *

error: Content is protected !!