ಹಿರಿಯಡ್ಕ: ಟಿಪ್ಪರ್ ಮತ್ತು ಬೈಕ್ ಅಪಘಾತ, ಸವಾರ ಸ್ಥಳದಲ್ಲೇ ಸಾವು
ಹಿರಿಯಡ್ಕ: (ಉಡುಪಿ ಟೈಮ್ಸ್ ವರದಿ) ಬಜೆಯಿಂದ ಜಲ್ಲಿ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಬೈಕ್ ಚಾಲಕನಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕುಕ್ಕೆಹಳ್ಳಿ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.
ಮೃತ ಬೈಕ್ ಸವಾರ ಕೋಟೇಶ್ವರದ ಮೊಹ್ಮದ್ ಹನೀಫ್ (45) ಎಂದು ತಿಳಿದು ಬಂದಿದೆ.
ಇವರು ಕುಕ್ಕೆಹಳ್ಳಿಯಿಂದ ಹಿರಿಯಡ್ಕ ಕಡೆ ಬೈಕ್ನಲ್ಲಿ ಬರುವಾಗ ಎದುರಿನಿಂದ ಬಂದ ಟಿಪ್ಪರ್ ಬೈಕ್ ಸವಾರನಿಗೆ ಗುದ್ದಿದೆ ಎನ್ನಲಾಗಿದೆ.
ಈ ಸಂದರ್ಭ ಬೈಕ್ ಸವಾರ ತಲೆಯ ಮೇಲೆಯೇ ಟಿಪ್ಪರ್ನ ಚಕ್ರ ಹರಿದ ಪರಿಣಾಮ ಹನೀಫ್ ಸ್ಥಳದಲ್ಲೇ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.
ಅಪಘಾತ ನಡೆಸಿದ ಟಿಪ್ಪರ್ ಚಾಲಕ ವಾಹನವನ್ನು ನಿಲ್ಲಿಸದೆ ಪರಾರಿಯಾಗಿದ್ದ, ಬಳಿಕ ಎರಡು ಮೂರು ಕಿ.ಮೀ ಮುಂದೆ ರಸ್ತೆ ಬದಿ ಟಿಪ್ಪರ್ ನಿಲ್ಲಿಸಿ ಚಾಲಕ ಪರಾರಿಯಾಗಿದ್ದನೆಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.