ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರೀಕನಿಗೂ ನ್ಯಾಯುಯುತ ಹಕ್ಕುಗಳನ್ನು ನೀಡಿದೆ: ಕೆ.ಜಯಪ್ರಕಾಶ್ ಹೆಗ್ಡೆ

ಉಡುಪಿ ಎ.14: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಸಮಾಜಕಲ್ಯಾಣ ಇಲಾಖೆ ಹಾಗೂ ಪ.ಜಾತಿ ಮತ್ತು ಪ.ವರ್ಗಗಳ ಸಂಘಟನೆಗಳು ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ, ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಅರ್. ಅಂಬೇಡ್ಕರ್ ಅವರ 130 ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಇಂದು ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರವನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು,  ಡಾ.ಬಿ.ಆರ್. ಅಂಬೇಡ್ಕರ್ ಅವರು  ಸಂವಿಧಾನದ ಮೂಲಕ  ದೇಶದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮಾನತೆ ಮೂಡಿಸುವ ಉದ್ದೇಶದಿಂದ ಹಲವು ವಿಷಯಗಳನ್ನು ಸಂವಿಧಾನದಲ್ಲಿ ಅಳವಡಿಸುವುದರ ಜೊತೆಗೆ  ಪ್ರಜಾಪ್ರಭುತ್ವದ ಬಲವರ್ದನೆಗೆ ಅವರು ನೀಡಿರುವ ಸಲಹೆಗಳ ಕಾರಣದಿಂದ ದೇಶದ ಜನತೆ ಅಂಬೇಡ್ಕರ್ ಅವರನ್ನು ಪ್ರತೀ ದಿನ ನೆನೆಯಬೇಕು. ಪ್ರಜಾಪ್ರಭುತ್ವದ ಬಲವರ್ಧನೆಗೆ  ಸಂವಿಧಾನದ ಮೂಲಕ ಅಂಬೇಡ್ಕರ್ ನೀಡಿರುವ ಪ್ರತಿಯೊಂದು ಸಲಹೆಗಳೂ ಅತ್ಯಮೂಲ್ಯವಾದದ್ದು.

ಭಾರತದ ಸಂವಿಧಾನವು ದೇಶದ ಎಲ್ಲಾ ವರ್ಗದ ನಾಗರೀಕರ ಶ್ರೇಯೋಭಿವೃದ್ದಿಯ ಉದ್ದೇಶ ಹೊಂದಿದ್ದು, ವೈವಿಧ್ಯಮಯ ಸಂಸ್ಕøತಿ ಹೊಂದಿರುವ ಭಾರತದ ಪ್ರತಿಯೊಬ್ಬ ನಾಗರೀಕನಿಗೂ ನ್ಯಾಯುಯುತ ಹಕ್ಕುಗಳನ್ನು ನೀಡಿದೆ. ಸಂವಿಧಾನ ರಚನೆ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಚಿಂತನೆಗಳಿಂದ ರೂಪಿತವಾದ ಕಾನೂನುಗಳನ್ನು ಸಮಾಜ ನೆನೆಯಬೇಕು, ಶಾಸಕಾಂಗ ಮತ್ತು ಕಾರ್ಯ0ಗಗಳು ತಮಗೆ ನೀಡಿರುವ ಅಧಿಕಾರವನ್ನು ಸಮರ್ಪಕವಾಗಿ ಬಳಿಸಿಕೊಂಡು ಸಮಾಜಮುಖಿ ಯೋಜನೆಗಳನ್ನು ರೂಪಿಸಿ, ಅವುಗಳನ್ನು ಎಲ್ಲಾ ವರ್ಗದ ಜನರಿಗೆ  ತಲುಪುವಂತೆ ಸಮರ್ಪಕವಾಗಿ ಅನುಷ್ಠಾನ ಮಾಡುವುದರ ಮೂಲಕ ಅಂಬೇಡ್ಕರ್  ಅವರ  ಸಂವಿಧಾನ ರಚನೆ ಹಾಗೂ ಪ್ರಜಾಪ್ರಭುತ್ವದ ಉದ್ದೇಶವನ್ನು ಸಾರ್ಥಕಗೊಳಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಘುಪತಿ ಭಟ್ ಅವರು ಮಾತನಾಡಿ, ಅಂಬೇಡ್ಕರ್ ಆಶಯದಂತೆ ಶೋಷಿತರ ಧ್ವನಿಯಾಗಿ ಸಮಾಜ ಇರಬೇಕು, ರಾಜ್ಯದಲ್ಲಿ ಪಿಟಿಸಿಲ್ ಕಾಯ್ದೆಯಲ್ಲಿ ಪರಿಶಿಷ್ಟ ವರ್ಗಕ್ಕೆ ನೀಡಲಾದ ಭೂಮಿಯಲ್ಲಿ ವಾಣಿಜ್ಯ ಚಟುವಟಿಕೆ ಕೈಗೊಳ್ಳಬಾರದು ಎಂಬ ನಿಯಮವಿದ್ದು, ಇದರಿಂದ ಪರಿಶಿಷ್ಟರು ಆರ್ಥಿಕವಾಗಿ ಸಬಲರಾಗಲು ತೊಂದರೆಯಾಗುತ್ತಿದೆ. ಈ ನ್ಯೂನತೆ ಕುರಿತಂತೆ ತಾನು ವಿಧಾನಸಭೆಯಲ್ಲಿ ಪ್ರಶ್ನಿಸಿದ್ದು, ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಪರಿಹಾರ ದೊರೆಯಲಿದೆ.

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿನ ಪ್ರಮುಖ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ಎಂದು ಹೆಸರಿಡುವ ಕುರಿತಂತೆ  ನಗರಸಭೆಯಲ್ಲಿ ಚಿರ್ಚಿಸಿ ನಿರ್ಣಯಿಸಲಾಗಿದೆ,  ರಜತಾದ್ರಿಯಲ್ಲಿನ ಅಂಬೇಡ್ಕರ್ ಪ್ರತಿಮೆ ಸುತ್ತ ನಗರಸಭೆಯ ಸಾಮಾನ್ಯ ನಿಧಿಯ 50 ಲಕ್ಷ ರೂ ವೆಚ್ಚದಲ್ಲಿ ಪಾರ್ಕ್ನಿರ್ಮಿಸಲಾಗುತ್ತಿದೆ. ಯುವ ಜನತೆ ಅಂಬೇಡ್ಕರ್ ಅವರ ಕುರಿತು ತಿಳಿದು, ಅವರ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ, ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಪ್ರದೀಪ್ ಕೆಂಚನೂರು ಮಾತನಾಡಿ, ಅಂಬೇಡ್ಕರ್ ಅವರು ಸಮಾನತೆ, ಸ್ವಾತಂತ್ರ್ಯ ಮತ್ತು ಭಾತೃತ್ವದ ಮೂಲ ಆಲೋಚನೆಗಳನ್ನು ಹೊಂದಿದ್ದರು.  ಸಮಾಜದಲ್ಲಿನ ಪ್ರತಿಯೊಬ್ಬರೂ ಭಾತೃತ್ವದಿಂದ, ಮಾನವೀಯ ಮೌಲ್ಯಗಳಿಂದ ಬದುಕು ಸಾಗಿಸಿ, ಅಂಬೇಡ್ಕರ್ ಅವರ ಚಿಂತನೆಯಂತೆ  ಅವೈಜ್ಞಾನಿಕ ಮತ್ತು ಅವೈಚಾರಿಕತೆಗೆ ಒಳಗಾಗದೆ, ಸಂವಿಧಾನದ ಆಶಯಗಳನ್ನು ದಿನನಿತ್ಯದ ಜೀವನದಲ್ಲಿ ಪಾಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸಮಾಜಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ಕೊರಗ ಸಮುದಾಯದರಿಂದ ಡೋಲು ನೃತ್ಯ ಹಾಗೂ ಗಣೇಶ್ ಗಂಗೊಳ್ಳಿ ಮತ್ತು ಬಳಗದವರಿಂದ ಅಂಬೇಡ್ಕರ್ ಗೀತೆಗಳ ಗಾಯನ ನಡೆಯಿತು. ಸಮಾರಂಭಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯ ಸಂಕೀರ್ಣದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಈ ವೇಳೆ ಭೌದ್ದ ಪ್ರಾರ್ಥನೆ ಆಯೋಜಿಸಲಾಗಿತ್ತು.

ಈ ಸಂದರ್ಬ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ತಾ.ಪಂ. ಅದ್ಯಕ್ಷೆ ಸಂಧ್ಯಾ ಕಾಮತ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಜಿ.ಪಂ. ಸದಸ್ಯೆ ಶಿಲ್ಪಾ ಸುವರ್ಣ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿ.ಪಂ. ಸಿಇಓ ಡಾ.ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್ , ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ನಗರಸಭೆ ಆಯುಕ್ತ ಡಾ. ಉದಯ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಅನಿತಾ ವಿ ಮಡ್ಲೂರು, ತಾಲೂಕು ಸಮಾಜ ಕಲ್ಯಾಣಾಧಿಕಾರಿ ರಮೇಶ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!