‘ಕಿರಿಕ್ ಪಾರ್ಟಿ’- ನಟ ರಕ್ಷಿತ್ ಶೆಟ್ಟಿ ವಿರುದ್ಧ ಜಾಮೀನು ರಹಿತ ವಾರೆಂಟ್
ಬೆಂಗಳೂರು: ಅನುಮತಿ ಇಲ್ಲದೇ ‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ಹಾಡು ಬಳಸಿದ್ದ ಮೊಕದ್ದಮೆಗೆ ಸಂಬಂಧಪಟ್ಟಂತೆ ನಟ ರಕ್ಷಿತ್ ಶೆಟ್ಟಿ ಬಂಧನಕ್ಕೆ ನಗರದ 9ನೇ ಎಸಿಎಂಎಂ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.
‘ಶಾಂತಿ ಕ್ರಾಂತಿ’ ಚಿತ್ರದ ಹಾಡನ್ನು ಲಹರಿ ಸಂಸ್ಥೆ ಅನುಮತಿ ಇಲ್ಲದೇ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಬಳಸಲಾಗಿತ್ತು. ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಪರಮ್ವಾ ಸ್ಟುಡಿಯೋ ವಿರುದ್ಧ ಲಹರಿ ಸಂಸ್ಥೆಯವರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
ಮೊಕದ್ದಮೆ ವಿಚಾರಣೆಗೆ ಹಲವು ಬಾರಿ ಗೈರಾಗಿದ್ದರಿಂದಾಗಿ ನಟ, ಸಂಗೀತ ನಿರ್ದೇಶಕ, ಪರಮ್ವಾ ಸ್ಟುಡಿಯೊ ಮಾಲೀಕರ ವಿರುದ್ಧ ವಾರಂಟ್ ಜಾರಿ ಮಾಡಲಾಗಿದೆ. ಅವರೆಲ್ಲರನ್ನೂ ಬಂಧಿಸಿ ಏಪ್ರಿಲ್ 27ರಂದು ವಿಚಾರಣೆಗೆ ಹಾಜರುಪಡಿಸುವಂತೆ ಪೊಲೀಸರಿಗೆ ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಕಿರಿಕ್ ಪಾರ್ಟಿಯಲ್ಲಿ ಲಹರಿ ಸಂಸ್ಥೆಗೆ ಸೇರಿದ ಹಾಡುಗಳ ಅಕ್ರಮ ಬಳಕೆ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಯಾರದೇ ಅನುಮತಿ ಇಲ್ಲದೇ ಹಾಡುಗಳನ್ನು ಬಳಕೆ ಮಾಡಿಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಈ ಬಗ್ಗೆ ಕ್ರಿಮಿನಲ್ ಮತ್ತು ಸಿವಿಲ್ ಕೇಸ್ ಹಾಕಿದ್ದ ಲಹರಿ ರೆಕಾರ್ಡಿಂಗ್ಸ್ ಕಾನೂನು ಹೋರಾಟ ಆರಂಭಿಸಿತ್ತು. ಕಾಪಿ ರೈಟ್ಸ್ ಆಕ್ಟ್ 63ಎ & 63 ಬಿ ಅಡಿಯಲ್ಲಿ ಕೇಸ್ ಹಾಕಲಾಗಿತ್ತು.