ನಕಲಿ ಸ್ವ್ಯಾಬ್ ಟೆಸ್ಟ್: ಇಬ್ಬರು ಆರೋಗ್ಯ ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ನಗರದ ಯಲಹಂಕ ವಲಯ ವ್ಯಾಪ್ತಿಯ ಕೊಡಿಗೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರ ಗಂಟಲು ದ್ರವ ಮಾದರಿ ಸಂಗ್ರಹ ಮಾಡುವ ಬದಲು ಖಾಲಿಟ್ಯೂಬ್‌ ತುಂಬುತ್ತಿದ್ದ ಇಬ್ಬರು ಆರೋಗ್ಯ ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. 

ಕೊಡಿಗೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ನಾಗರಾಜ್‌ ಹಾಗೂ ಮತ್ತೊಬ್ಬ ವ್ಯಕ್ತಿ ಕೊರೋನಾ ಸೋಂಕಿನ ಪರೀಕ್ಷೆಗೆ ಒಳ ಪಡುವವರಿಂದ ಗಂಟಲು ದ್ರವ ಮಾದರಿ ಸಂಗ್ರಹ ಮಾಡುವ ಟ್ಯೂಬ್‌ ನಲ್ಲಿ ಖಾಲಿ ಕಡ್ಡಿ ಹಾಕಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. 

ಕೊಡಿಗೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರತೀನಿತ್ಯ 600 ಮಂದಿಗೆ ಕೋವಿಡ್ ಪರೀಕ್ಷೆ ಮಾಡಿ ಎಂದು ಸ್ವ್ಯಾಬ್ ಸ್ಟಿಕ್ ಕಳುಹಿಸಲಾಗಿತ್ತು. ಆದರೆ, ಈ ಬ್ಬರು ಸ್ವ್ಯಾಬ್ ಪರೀಕ್ಷಕರು ಕೋವಿಡ್ ಪರೀಕ್ಷೆ ಮಾಡದೆ ಆಸ್ಪತ್ರೆಯಲ್ಲೇ ಕುಳಿತು ಸ್ವ್ಯಾಬ್ ಸ್ಟಿಕ್ ಮುರಿದು ವ್ಯರ್ಥ ಮಾಡುತ್ತಿದ್ದರು. ಬಳಿಕ ಅತ್ಯಧಿಕ ಕೋವಿಡ್ ಟೆಸ್ಟ್ ಮಾಡಿದಂತೆ ಹೇಳಿಕೊಳ್ಳುತ್ತಿದ್ದರು. 

ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶಿಸಿದ್ದಾರೆ. 

ಜೊತೆಗೆ ಕೋವಿಡ್ ಪರೀಕ್ಷಾ ಪರಿಕರಗಳನ್ನು ಹಾಳು ಮಾಡಿದ ಆರೋಗ್ಯ ಸಿಬ್ಬಂದಿ ವಿರುದ್ಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ. 

ನಕಲಿ ಸ್ವ್ಯಾಬ್ ಪರೀಕ್ಷೆ ಮಾಡಿರುವ ವಿಡಿಯೋವನ್ನು ನಾವು ನೋಡಿದ್ದೇವೆ. ಗುತ್ತಿಗೆ ಆಧಾರದ ಮೇಲೆ ಇಬ್ಬರೂ ಕೆಲಸ ಮಾಡುತ್ತಿದ್ದರು. ಕಳೆದ 10 ತಿಂಗಳುಗಳಿಂದ ಕೋವಿಡ್-19 ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ನಾನು ಆಸ್ಪತ್ರೆಯಲ್ಲಿ ಇಲ್ಲದಿರುವ ಸಂದರ್ಭದಲ್ಲಿ ಇಬ್ಬರೂ ಈ ರೀತಿ ಮಾಡಿದ್ದಾರೆ ಎಂದು ಆರೋಗ್ಯಾಧಿಕಾರಿಯೊಬ್ಬರು ಹೇಳಿದ್ದಾರೆ. 

ಆರೋಪಿಗಳು ಕೇವಲ ಸರ್ಕಾರಕ್ಕಷ್ಟೇ ಮೋಸ ಮಾಡಿಲ್ಲ. ತಪ್ಪು ಮಾಹಿತಿ ನೀಡಿ ಕ್ರಿಮಿನಲ್ ಅಪರಾಧವನ್ನೂ ಮಾಡಿದ್ದಾರೆ. ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆ 177 ಹಾಗೂ 408 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಆರೋಗ್ಯ ಆಯುಕ್ತ ಡಾ.ಕೆ.ವಿ.ತ್ರಿಲೋಕ್ ಚಂದ್ರ ಅವರು ಪ್ರತಿಕ್ರಿಯೆ ನೀಡಿ, ಘಟನೆ ಬಳಿಕ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. 

ರಾಜ್ಯದಲ್ಲಿರುವ ಇತರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತದೆ. ಪ್ರತೀನಿತ್ಯ ಈ ಕೇಂದ್ರಗಳಲ್ಲಿ 650 ಸ್ವ್ಯಾಬ್ ಸಂಗ್ರಹ ಮಾಡುವಂತೆ ಗುರಿ ನೀಡಲಾಗಿದೆ. ಇತ್ತೀಚೆಗೆ 12 ಸ್ಯಾಂಪಲ್ ಗಳ ಪರೀಕ್ಷಾ ವರದಿ ಪಾಸಿಟಿವ್ ಆಗಲೀ ನೆಗೆಟಿವ್ ಆಗಲೀ ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!