ರಜತ ಸಂಭ್ರಮದಲ್ಲಿ ಕೊಡವೂರು ಬ್ರಾಹ್ಮಣ ಮಹಾಸಭಾ- ಎ.14ರಂದು ಒಂದು ವರ್ಷದ ಕಾರ್ಯಕ್ರಮಕ್ಕೆ ಚಾಲನೆ
ಮಲ್ಪೆ: ಕೊಡವೂರು ಬ್ರಾಹ್ಮಣ ಮಹಾಸಭಾ 1996ರಲ್ಲಿ ಪ್ರಾರಂಭವಾಗಿ ಇದೀಗ 2022 ರಲ್ಲಿ ಸಂಸ್ಥೆಯು 25 ಸಾರ್ಥಕ ಸಂವತ್ಸರಗಳನ್ನು ಪೂರೈಸಲಿದ್ದು, ಎಪ್ರಿಲ್ 2021 ರಿಂದ ಎಪ್ರಿಲ್ 2022 ರವರೆಗೆ ಒಂದು ವರ್ಷದ ಕಾಲ “ರಜತ ಪಥದಲ್ಲಿ ವಿಪ್ರ ನಡಿಗೆ” ಎಂಬ ಶಿರೋನಾಮೆಯಡಿಯಲ್ಲಿ ರಜತೋತ್ಸವವನ್ನು ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಶಾಶ್ವತ ಕಾರ್ಯಕ್ರಮಗಳೊಂದಿಗೆ ಬಹಳ ವಿಜ್ರಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸುವುದೆಂದು ಈಗಾಗಲೇ ನಿರ್ಧರಿಸಿದ್ದು ನಾಡಿದ್ದು ಎಪ್ರಿಲ್ 14 ರಂದು ಯುಗಾದಿಯ ಪರ್ವ ಕಾಲದಲ್ಲಿ ರಜತೋತ್ಸವದ ಒಂದು ವರ್ಷದ ಕಾರ್ಯಕ್ರಮಗಳಿಗೆ ಕೊಡವೂರಿನ ವಿಪ್ರಶ್ರೀ ಕಲಾಭವನದಲ್ಲಿ ಚಾಲನೆ ನೀಡಲಾಗುವುದು.
ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಪಟ್ಟ ಈ ಕಾರ್ಯಕ್ರಮವನ್ನು 25 ದೀಪಗಳನ್ನು ಬೆಳಗಿಸುವುದರ ಮೂಲಕ ಉದ್ಘಾಟಿಸುವರು. ಉಡುಪಿಯ ಜನಪ್ರಿಯ ಶಾಸಕರಾದ ರಘುಪತಿ ಭಟ್ಟರ ಸಭಾಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಮುಕ್ತೇಸರರಾದ ಭೀಮೇಶ್ವರ ಜೋಶಿಯವರು ಮುಖ್ಯ ಅತಿಥಿ ಯಾಗಿ ಆಗಮಿಸುವರು. ಅತಿಥಿಗಳಾಗಿ ಕರ್ನಾಟಕ ಬ್ಯಾಂಕಿನ ಡಿ ಜಿ ಎಂ ಬಿ. ಗೋಪಾಲಕೃಷ್ಣ ಸಾಮಗ ಹಾಗೂ ಉಡುಪಿ ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಮಂಜುನಾಥ ಉಪಾಧ್ಯ ಆಗಮಿಸುವರು.
ಇದೇ ಸಂದರ್ಭದಲ್ಲಿ ಖ್ಯಾತ ಶಿಕ್ಷಣ ತಜ್ಞ ಹಾಗೂ ವಿಜ್ಞಾನಿಗಳಾದ ಕೆ. ಪಿ. ರಾಯರಿಗೆ “ವಿಪ್ರ ಜ್ಞಾನಿ” ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಮತ್ತು ಕೊಡವೂರು ಬ್ರಾಹ್ಮಣ ಮಹಾಸಭಾ ಪ್ರಾರಂಭಿಸಲು 24 ವರ್ಷಗಳ ಹಿಂದೆ ಮಾರ್ಗದರ್ಶನ ನೀಡಿದ ಹರಿದಾಸ ಉಪಾಧ್ಯಾಯ ಹಾಗೂ ಜಯರಾಮ ರಾವ್ ಮತ್ತು ಕೊಡವೂರು ಬ್ರಾಹ್ಮಣ ಮಹಾಸಭಾದ ಸ್ಥಾಪಕ ಕಾರ್ಯದರ್ಶಿಗಳಾದ ಗೋವಿಂದ ಐತಾಳರನ್ನು ಗೌರವಿಸಲಾಗುವುದು. ಅಂದು ಮುಂಜಾನೆ 108 ಕಾಯಿ ಗಣಹೋಮ ಹಾಗೂ ಗೋಪೂಜೆ ಕಂಬಳಕಟ್ಟ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ಜರಗಲಿದೆ ಎಂದು ರಜತೋತ್ಸವದ ಕಾರ್ಯಾಧ್ಯಕ್ಷ ಮಂಜುನಾಥ ಭಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.