ಮೂಡುಬೆಳ್ಳೆ ಟೆಂಪೋ ಚಾಲಕನಿಗೆ ಹಲ್ಲೆ ಪ್ರಕರಣ: ಎಸ್ಐ ಶ್ರೀಶೈಲ ಎತ್ತಂಗಡಿ?

ಉಡುಪಿ ಏ.10(ಉಡುಪಿ ಟೈಮ್ಸ್ ವರದಿ):  ಮೂಡುಬೆಳ್ಳೆಯಲ್ಲಿ ನಡೆದ ಟೆಂಪೋ ಚಾಲಕನ ಮೇಲಿನ ಪೊಲೀಸ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ತರವಾದ ಬೆಳವಣಿಗೆಯೊಂದು ನಡೆದಿದೆ. ಈ ವಿಚಾರಕ್ಕೆ ಸಂಬಂಧಿಸಿ ಚಾಲಕನ ಮೇಲೆ ಹಲ್ಲೆ ಮಾಡಿದ ಶಿರ್ವ ಠಾಣೆ ಎಸ್‍ಐ ಶ್ರೀಶೈಲ ಅವರ ವರ್ಗಾವಣೆ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಘಟನೆಗೆ ಸಂಬಂಧಿಸಿ ಟೆಂಪೋ ಚಾಲಕರ ಸಂಘ, ಶಾಸಕ ಕೆ ರಘುಪತಿ ಭಟ್ ಹಾಗೂ ಪೊಲೀಸ್ ವರಿಷ್ಟಾಧಿಕಾರಿ ಅವರನ್ನು ಭೇಟಿ ಮಾಡಿ ಘಟನೆ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿತ್ತು. ಈ ಕುರಿತಾಗಿ ನಡೆದ ಮಾತುಕತೆಯಲ್ಲಿ, ಹಲ್ಲೆ ನಡೆಸಿದ ಎಸ್‍ಐ ಅವರನ್ನು ವರ್ಗಾವಣೆ ಮಾಡುವ ವಿಚಾರಕ್ಕೆ ಸಂಬಂಧಿಸಿ ಚರ್ಚೆಗಳು ನಡೆದಿದೆ ಎನ್ನಲಾಗುತ್ತಿದೆ.

ಈ ಕುರಿತಾಗಿ “ಉಡುಪಿ ಟೈಮ್ಸ್”ಗೆ ಪ್ರತಿಕ್ರಿಯೆ ನೀಡಿದ ಟೆಂಪೋ ಚಾಲಕರ ಸಂಘದ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ಅವರು, ವಾಹನ ಚಾಲನೆ ಪರವಾನಿಗೆ ವಿಚಾರಕ್ಕೆ ಸಂಬಂದಿಸಿ ಪೊಲೀಸರು ವಾಹನ ಚಾಲಕನನ್ನು ಎಳೆದುಕೊಂಡು ಹೋಗುವ ಅಗತ್ಯ ಇರಲಿಲ್ಲ. ಎಳೆದುಕೊಂಡು ಹೋಗಲು ಅವರೇನು ಚಿನ್ನ ಕದ್ದು ತೆಗೆದುಕೊಂಡು ಹೋಗುತ್ತಿರಲಿಲ್ಲ, ಅಥವಾ ರೌಡಿಸಂ ಮಾಡಿಕೊಂಡು ಹೋಗುತ್ತಿರಲಿಲ್ಲ. ಅವರು ಕೇವಲ ಜಲ್ಲಿ ಕಲ್ಲು ಸಾಗಿಸುತ್ತಿದ್ದರು, ಕಟ್ಟಡ ಸಾಮಾಗ್ರಿ ಸಾಗಿಸುತ್ತಿದ್ದ ಅವರನ್ನು ಕೊರಳಪಟ್ಟಿ ಹಿಡಿದು ಕರೆದುಕೊಂದು ಹೋಗಿದ್ದಾರೆ ಎಂದರೆ ನಮ್ಮ ಕಾನೂನು ಏನು ಮಾಡುತ್ತಿದೆ. ಯಾಕೆ ಈ ರೀತಿ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾಲಕ, ಚಾಲಕ ಯಾರೇ ಆದರೂ ಮೊದಲು ನಾವು ಮನುಷತ್ವವನ್ನು ಬೆಳೆಸಿಕೊಳ್ಳಬೇಕು. 64 ವರ್ಷದಲ್ಲೂ ಅವರು ಈ ಕಾಡು ಗುಡ್ಡೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರೆ ಅವರ ಮನೆಯ ಸಮಸ್ಯೆ ಏನು ಇರಬಹುದು ಎಂದು ನಾವು ಸಾಮಾನ್ಯ ಜನತೆ ಅರ್ಥಮಾಡಿಕೊಳ್ಳಬೇಕು. ಅಂತಹ ಹಿರಿಯ ವ್ಯಕ್ತಿಗಳಿಗೆ ಹೊಡೆಯಲು ಮನಸ್ಸಾದರೂ ಹೇಗೆ ಬಂತು ಎಂದು ಘಟನೆಯನ್ನು ಖಂಡಿಸಿದರು. ನಾವೆಲ್ಲ ಚಾಲಕರ ಪರವಾಗಿ ನಾವು ನಿಂತಿದ್ದು ನಮಗೆ ಶಾಸಕರು ನಿರಂತವಾಗಿ ಬೆಂಬಲ ನೀಡುತ್ತಾ ಬಂದಿದ್ದಾರೆ ಎಂದು ತಿಳಿಸಿದರು.

ಈ ಕುರಿತಾಗಿ ಉಡುಪಿ ಟೈಮ್ಸ್ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್. ವಿಷ್ಣುವರ್ಧನ್ ಅವರನ್ನು ಮಾತನಾಡಿಸಿದಾಗ ಪ್ರತಿಕ್ರಿಯೆ ನೀಡಿದ ಅವರು, ಈ ಘಟನೆ ಕುರಿತಾಗಿ ಡಿವೈಎಸ್‍ಪಿ ಅವರಿಗೆ ತನಿಖೆ ನಡೆಸಲು ಸೂಚಿಸಿದ್ದು ಈ ತನಿಖೆಯ  ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!