ಕುಂದಾಪುರ: ಬಾವಿಗೆ ಬಿದ್ದ ಚಿರತೆಯ ರಕ್ಷಣೆ
ಕುಂದಾಪುರ: ಬಾವಿಗೆ ಬಿದ್ದಿದ್ದ ಚಿರತೆಯನ್ನು ರಕ್ಷಿಸಿರುವ ಘಟನೆ ಕುಂದಪುರದ ಸೌಕೂರು ಎಂಬಲ್ಲಿ ನಡೆದಿದೆ. ಅಂದಾಜು 30 ಅಡಿ ಆಳದ ಬಾವಿಗೆ ಬಿದ್ದಿದ್ದ ಸುಮಾರು 2 ವರ್ಷದ ಹೆಣ್ಣು ಚಿರತೆಯನ್ನು ಹಗ್ಗ ಹಾಗೂ ಬುಟ್ಟಿಯನ್ನು ಬಳಸಿ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ.
ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸಮೀಪದ ಅಶೋಕ ದೇವಾಡಿಗ ಎನ್ನುವವರ ಮನೆಯ ಬಾವಿಗೆ ಹೆಣ್ಣು ಚಿರತೆಯೊಂದು ಬಿದ್ದಿತ್ತು. ಬಾವಿಗೆ ಚಿರತೆ ಬಿದ್ದಿರುವುದನ್ನು ಕಂಡ ಮನೆಯವರು ಸ್ಥಳೀಯರ ಸಹಕಾರದಿಂದ ಕಾರ್ಯಾಚರಣೆ ನಡೆಸಿ ಚಿರತೆಯನ್ನು ರಕ್ಷಿಸಿದ್ದಾರೆ.