ಐನೂರು ರೂ.ಲಂಚ ನೀಡದಕ್ಕೆ ಶಿರ್ವ ಎಸ್ಐಯಿಂದ ದೌರ್ಜನ್ಯ, ಟೆಂಪೋ ಚಾಲಕ ಆಸ್ಪತ್ರೆಗೆ ದಾಖಲು

ಉಡುಪಿ ಏ.10(ಉಡುಪಿ ಟೈಮ್ಸ್ ವರದಿ): ಟೆಂಪೋವನ್ನು ತಡೆದ ಶಿರ್ವ ಪೊಲೀಸರು ಚಾಲಕನ ಮೇಲೆ ಶಿರ್ವ ಎಸ್ಐ ಶ್ರೀಶೈಲ ಹಲ್ಲೆ ನಡೆಸಿರುವ ಘಟನೆ ನಿನ್ನೆ ರಾತ್ರಿ ಮೂಡುಬೆಳ್ಳೆಯಲ್ಲಿ ನಡೆದಿದೆ. ಹಿರಿಯಡ್ಕದ ಕೊಂಡಾಡಿಯ ಚಾಲಕ ಶೇಖರ ಪೂಜಾರಿ(65) ಹಲ್ಲೆಗೊಳಗಾದ ಟೆಂಪೋ ಚಾಲಕ.

ಈ ಬಗ್ಗೆ ಟೆಂಪೋ ಚಾಲಕರ ಸಂಘದ ಮುಖಂಡ ರಾಘವೇಂದ್ರ ಶೆಟ್ಟಿ ಅವರು ಮಾಹಿತಿ ನೀಡಿದ್ದು, ಆರಂಭದಲ್ಲಿ ನನಗೆ ಪೊಲೀಸರು ಚಾಲಕನ ಮೇಲೆ ಹಲ್ಲೆ ನಡೆಸಿರುವ ವಿಚಾರ ತಿಳಿದಿರಲಿಲ್ಲ. ನಿನ್ನೆ ರಾತ್ರಿ ಟೆಂಪೋ ಮಾಲಕರು ಕರೆ ಮಾಡಿ ಶಿರ್ವ ಪೊಲೀಸರು ಟೆಂಪೋ ಹಾಗೂ ಚಾಲಕನನ್ನು ಠಾಣೆಗೆ ಕರೆದುಕೊಂಡು ಹೋಗಿರುವ ವಿಚಾರ ತಿಳಿಸಿದ್ದರು. ಬಳಿಕ ನಿನ್ನೆ ರಾತ್ರಿ 8.30 ರ ಸುಮಾರಿಗೆ ಟೆಂಪೋ ಮಾಲಕರ ಜೊತೆ ಪೊಲೀಸ್ ಠಾಣೆಗೆ ಹೋದಾಗ ಅಲ್ಲಿ ಎಸ್‍ಐ ಅವರು ನನ್ನ ಬಳಿ ವಿನಮ್ರತೆಯಿಂದ ಮಾತನಾಡಿ, ನೀವು ಕರೆ ಮಾಡಿದ್ದರೆ ನಾನು ಇವರನ್ನು ಬಿಟ್ಟು ಕಳುಹಿಸುತ್ತಿದ್ದೆ ಎಂದು ತಿಳಿಸಿದ್ದಾರೆ. ಈ ವೇಳೆ 500 ದಂಡ ಪಾವತಿಸಿ ಚಾಲಕನನ್ನು ಕರೆದುಕೊಂಡು ಬರಲಾಯಿತು.

ಬಳಿಕ ಇಂದು ಬೆಳಿಗ್ಗೆ ಎಂದಿನಂತೆ ವಾಹನ ಚಾಲಕ ಬಾರದಿರುವುದನ್ನು ಗಮನಿಸಿದ ಮಾಲಿಕ ಚಾಲಕನಿಗೆ ಕರೆ ಮಾಡಿ ವಿಚಾರಿಸಿದಾಗ ತನಗೆ ಎದೆ ನೋವು ಆಗುತ್ತಿದ್ದು ಆರೋಗ್ಯ ಸರಿಯಿಲ್ಲ ಎಂದು ತಿಳಿಸಿದ್ದಾರೆ. ಬಳಿಕ ವಿಚಾರಿಸಿದಾಗ ರಾತ್ರಿ ಪೊಲೀಸ್ ಸಿಬ್ಬಂದಿಗಳು ಹಲ್ಲೆ ನಡೆಸಿರುವ ವಿಚಾರ ತಿಳಿಸಿದ್ದಾರೆ. ಈ ವೇಳೆ ತಕ್ಷಣ ಟೆಂಪೋದ ಮಾಲಕರು ಸ್ಥಳಕ್ಕೆ ಬಂದು ಚಾಲಕನನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಈ ವೇಳೆ ಈ ಹಿಂದೊಮ್ಮೆ ಟೆಂಪೋವನ್ನು ತಡೆದಿದ್ದ ಪೊಲೀಸರು ಮಾಲಕನನ್ನು ಬಂದು ಮಾಮೂಲಿ ಫಿಕ್ಸ್ ಮಾಡಿ ಹೋಗಲು ಹೇಳು ಎಂದು ಟೆಂಫೋ ಚಾಲಕನ ಬಳಿ ತಿಳಿಸಿದ್ದರಂತೆ. ಆದರೆ ಮಾಲಕರು ತೆರಳದಿದ್ದಾಗ, ನಿನ್ನೆ ರಾತ್ರಿ ಮತ್ತೆ ಟೆಂಪೋ ತಡೆದ ಪೊಲೀಸರು ಟೆಂಪೋ ಚಾಲಕ ಶೇಖರ ಪೂಜಾರಿ ಅವರ ಬಳಿ 500 ರೂ. ನೀಡುವಂತೆ ಕೇಳಿದ್ದಾರೆ. ಆಗ ತನ್ನ ಬಳಿ ಹಣ ಇಲ್ಲವೆಂದು ಚಾಲಕ ಹೇಳಿದ್ದು ಅದಕ್ಕೆ ಪೊಲೀಸ್ ಸಿಬ್ಬಂದಿಗಳು ಚಾಲಕನನ್ನು ಅವಾಚ್ಯ ಪದಗಳಿಂದ ಬೈದಿದ್ದು ಮಾತ್ರವಲ್ಲದೆ ಹಿಗ್ಗಾ ಮುಗ್ಗ ಥಳಿಸಿದ್ದಾರೆ. ಅಲ್ಲದೆ ಈ ವಿಚಾರವನ್ನು ಹೇಳಿದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೆದರಿಸಿ ಚಾಲಕನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಚಾಲಕ ಹಿರಿಯಡ್ಕದ ಕೊಂಡಾಡಿಯ ಚಾಲಕ ಶೇಖರ ಪೂಜಾರಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಈ ಕುರಿತಾಗಿ ಇಂದು ಪ್ರತಿಕ್ರಿಯೆ ನೀಡಿ, ನಾನು ವಾಹನದಲ್ಲಿ ಬರುತ್ತಿದ್ದಂತೆ ಪೊಲೀಸರು ಜೀಪ್‍ನಲ್ಲಿ ಬಂದು ನನ್ನ ವಾಹನವನ್ನು ತಡೆದಿದ್ದಾರೆ. ಈ ವೇಳೆ ಪೊಲೀಸರು ಪರವಾನಿಗೆ ಕೇಳಿದ್ದು ಪರವಾನಗೆ ಇಲ್ಲ ಎಂದಾಗ 500 ರೂ ಕೇಳಿದರು. ಅದರೆ ನನ್ನ ಬಳಿ ಹಣ ಇರಲಿಲ್ಲ. ಆದ್ದರಿಂದ ನಾನು ನನ್ನ ಬಳಿ ಹಣ ಇಲ್ಲ ಎಂದು ತಿಳಿಸಿದ್ದು, ಆಗ ಪೊಲೀಸರು ವಾಹನವನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಬರುವಂತೆ ತಿಳಿಸಿದ್ದರು. ಆಗ ನಾನು ಒಂದು ಬಾರಿ ನಮ್ಮ ಮಾಲಕರ ಬಳಿ ಮಾತನಾಡುತ್ತೇನೆ ಎಂದು ಕೇಳಿಕೊಂಡಾಗ ಪೊಲೀಸರು ಅದೆಲ್ಲ ನಡಿಯಲ್ಲ ಎಂದು ಗದರಿಸಿ ಗಾಡಿಯನ್ನು ಠಾಣೆಗೆ ತರುವಂತೆ ಸೂಚಿಸಿದರು. ಈ ವೇಳೆ ನಾನು ಮಾಲಕರ ಬಳಿ ಮಾತನಾಡಿದ್ದು ಅವರು ಪಕ್ಕದಲ್ಲಿ ಅಂಗಡಿ ಇದ್ದರೆ ಅವರಿಂದ ಹಣ ಪಡೆದು ನೀಡುವಂತೆ ಸೂಚಿಸಿದ್ದರು. ಈ ವೇಳೆ ಗದರಿಸಿದ್ದ ಪೊಲೀಸರು ನನಗೆ ಹೊಡೆದಿದ್ದಾರೆ. ಅಲ್ಲದೆ ಪೊಲೀಸ್ ವಾಹನಕ್ಕೆ ಬಲವಂತವಾಗಿ ಕರೆದುಕೊಂಡು ಹೋದದ್ದು ಮಾತ್ರವಲ್ಲದೆ ಪೊಲೀಸ್ ವಾಹನದ ಒಳಗೂ ಹೊಡೆದಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಪರವಾನಿಗೆ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ಪರವಾನಿಗೆ ಇದೆ ಆದರೆ ಒಂದೆರಡು ಟ್ರಿಪ್‍ಗೆ ಪರವಾನಿಗೆ ಪಡೆದರೆ ನಷ್ಟ ಉಂಟಾಗುತ್ತದೆ ಎಂಬ ಕಾರಣಕ್ಕೆ ಪರವಾನಿಗೆ ಮಾಡಿಸುವುದಿಲ್ಲ. ಸಾಮಾನ್ಯವಾಗಿ ಎಲ್ಲಾ ಮಾಲಕರು ಇದೇ ರೀತಿ ಮಾಡುತ್ತಾರೆ ಎಂದು ತಿಳಿಸಿದರು. 

ಈ ಘಟನೆ ಬಗ್ಗೆ ಟೆಂಪೋ ಚಾಲಕರೆಲ್ಲ ಶಾಸಕರಿಗೆ ಹಾಗೂ ಪೊಲೀಸ್ ವರಿಷ್ಟಾಧಿಕಾರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ. ಈ ನಡುವೆ ಹಲ್ಲೆ ನಡೆಸಿರುವ ಶಿರ್ವ ಎಸ್ಐ ಶ್ರೀಶೈಲ ಕುರಿತಾಗಿ ಈ ಹಿಂದೆಯೂ ಹಲವಾರು ದೂರುಗಳು ಕೇಳಿ ಬಂದಿವೆ ಎಂದೂ ತಿಳಿಸಿದ್ದಾರೆ. 

ಇನ್ನು ಘಟನೆ ಕುರಿತಂತೆ ಶಿರ್ವ ಠಾಣೆಯ ಎಸ್‍ಐ ಶ್ರೀ ಶೈಲ ಅವರು ಪ್ರತಿಕ್ರಿಯೆ ನೀಡಿ, ವಶ ಪಡಿಸಿಕೊಂಡಿದ್ದ ಟೆಂಪೂ ಜಲ್ಲಿ ಸಾಗಾಟದ ಟೆಂಪೊ ಆಗಿದ್ದು, ನಿನ್ನೆ ರಾತ್ರಿ ತಪಾಸಣೆ ನಡೆಸುತ್ತಿದ್ದ ವೇಳೆ ವಾಹನಗಳನ್ನು ಪರಿಶೀಲಿಸುವಂತೆ ಇವರ ವಾಹನವನ್ನು ಕೂಡಾ ತಡೆದು ಪರಿಶೀಲಿಸಲಾಗಿದೆ. ಈ ವೇಳೆ ವಾಹನ ಚಾಲಕನ ಬಳಿ ಪರವಾನಿಗೆ ಕೇಳಿದಾಗ ಯಾವುದೇ ಪರವಾನಿಗೆ ಇಲ್ಲದೆ ಇರುವುದು ತಿಳಿದು ಬಂದಿದೆ. ಈ ವೇಳೆ ದಂಡ ಕಟ್ಟಲು ಹೇಳಿದಾದ ಟೆಂಪೋ ಚಾಲಕ ತನ್ನ ಬಳಿ ಹಣ ಇಲ್ಲ ಎಂದು ಹೇಳಿದ್ದು, ಆಗ ಎಸ್‍ಐ ಠಾಣೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಚಾಲಕ ಪೊಲೀಸ್ ಜೀಪು ಎದುರು ಮಲಗಿ ವಿರೋಧ ವ್ಯಕ್ತ ಪಡಿಸಿದ್ದರು ಎಂದು ತಿಳಿಸಿದ್ದಾರೆ. ಇದೇ ವೇಳೆ ಚಾಲಕನಿಗೆ ಯಾವುದೇ ರೀತಿ ಹಲ್ಲೆ ನಡೆಸಿಲ್ಲ ಎಂದಿರುವ ಅವರು, ಈ ಬಗ್ಗೆ ಶಿರ್ವ ಠಾಣೆಯ ಸಿಸಿ ಟಿವಿ ಪರಿಶೀಲಿಸಬಹುದು ಎಂದು ತಿಳಿಸಿದ್ದಾರೆ. 

1 thought on “ಐನೂರು ರೂ.ಲಂಚ ನೀಡದಕ್ಕೆ ಶಿರ್ವ ಎಸ್ಐಯಿಂದ ದೌರ್ಜನ್ಯ, ಟೆಂಪೋ ಚಾಲಕ ಆಸ್ಪತ್ರೆಗೆ ದಾಖಲು

  1. The field police personnel try to settle the matter by taking bribe, it is common practice. When they are in problems, they must keep in touch with Union leaders & take their advice to solve their problem. Keep always Union leaders number in their Mobile.

Leave a Reply

Your email address will not be published. Required fields are marked *

error: Content is protected !!