ಉಡುಪಿ ಏ.9(ಉಡುಪಿ ಟೈಮ್ಸ್ ವರದಿ): ರಾಜ್ಯಾದ್ಯಂತ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಹೊರಡಿಸಿರುವ ನೈಟ್ ಕರ್ಫ್ಯೂನಲ್ಲಿ ಉಡುಪಿ ಮತ್ತು ಮಣಿಪಾಲವನ್ನು ಹೊರತು ಪಡಿಸಬೇಕು ಎಂದು ಶಾಸಕ ಕೆ. ರಘುಪತಿ ಭಟ್ ಅವರು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಎಪ್ರೀಲ್, ಮೇ, ತಿಂಗಳಲ್ಲಿ ಸಾಕಷ್ಟು ದಾರ್ಮಿಕ ಕಾರ್ಯಕ್ರಮಗಳು ರಾತ್ರಿ ಅವಧಿಯಲ್ಲಿ ನಡೆಯುತ್ತದೆ. ದೈವದ ಕೋಲ ನಾಗಾರಾಧನೆ, ಯಕ್ಷಗಾನ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತದೆ. ಕಳೆದ ವರ್ಷ ಕೋವಿಡ್‍ನ ಪರಿಣಾಮದಿಂದ ಇದ್ಯಾವುದೂ ನಡೆದಿಲ್ಲ. ಅಲ್ಲದೆ, ಸಾಕಷ್ಟು ಮಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಲ್ಲದೆ ಅನೇಕ ಮಂದಿಯ ಧಾರ್ಮಿಕ ಭಾವನೆಗೆ ಇದು ಧಕ್ಕೆ ತಂದಿದೆ. ದೈವದ ಕೋಲ ಮಾಡುವವರು ಅದಕ್ಕಾಗಿ ಮುಂಚೆಯೇ ದಿನಾಂಕವನ್ನು ಕಾಯ್ದಿರಿಸಿಕೊಂಡಿರುತ್ತಾರೆ. ಆದ್ದರಿಂದ ಈಗ ನೈಟ್ ಕರ್ಫ್ಯೂ ವಿಧಿಸಿದರೆ ಆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಸಮಸ್ಯೆಯಾಗಲಿದೆ.
ಸದ್ಯ ಉಡುಪಿಯಲ್ಲಿ ಕೋವಿಡ್ ಕುರಿತಾಗಿ ಭಯ ಪಡುವ ಪರಿಸ್ಥಿತಿ ಇಲ್ಲ. ಕೋವಿಡ್ ಪ್ರಕರಣಗಳ ಪ್ರಭಾವ ತುಂಬಾ ಕಡಿಮೆ ಇದೆ. ಈ ಹಿಂದೆ ಮಣಿಪಾಲದ ಎಂಐಟಿ ಕ್ಯಾಂಪಸ್ ನಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿತ್ತಾದರೂ ಅಲ್ಲಿ ಜಿಲ್ಲಾಡಳಿತ ಸರಕಾರದ ನೆರವಿನೊಂದಿಗೆ ಯಶಸ್ವಿಯಾಗಿ ಕಂಟೈನ್ ಮೆಂಟ್ ಝೋನ್ ಮಾಡಿದ್ದು ಅಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ.
ಜಿಲ್ಲೆಯಲ್ಲಿ ಸದ್ಯ 401 ಸಕ್ರಿಯ ಪ್ರಕರಣಗಳು ಮಾತ್ರ ಇದ್ದು, ಈ ಪೈಕಿ ಆಸ್ಪತ್ರೆಯಲ್ಲಿ ಕೇವಲ 59 ಮಂದಿ ಮಾತ್ರ ಇದ್ದಾರೆ. ಅವರ ಆರೋಗ್ಯ ಸ್ಥಿತಿಯೂ ಸುಧಾರಿಸಿದೆ. ಅಲ್ಲದೆ ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ತೀರಾ ಕಡಿಮೆ ಇದ್ದು ಇತ್ತೀಚಿನ ದಿನಗಳಲ್ಲಿ ಯಾವುದೇ ರೀತಿಯ ಮರಣ ಪ್ರಕರಣಗಳು ಪತ್ತೆಯಾಗಿಲ್ಲ ಜಿಲ್ಲೆಯಲ್ಲಿ ದಿನಕ್ಕೆ ಎರಡುವರೆ ಸಾವಿರಷ್ಟು ಮಂದಿಯ ಪರೀಕ್ಷೆ ನಡೆಸುತ್ತಿದ್ದು ಈ ಪೈಕಿ 50 ರಿಂದ 60 ಮಂದಿ ಮಾತ್ರ ಪಾಸಿಟಿವ್ ಕಂಡು ಬರುತ್ತಿದ್ದು, 2.5 ಶೇ. ದಷ್ಟು ಮಾತ್ರ ಬೆಳವಣಿಗೆ ಕಾಣುತ್ತಿದೆ. ಆದ್ದರಿಂದ ನೈಟ್ ಕಫ್ರ್ಯೂ ವಿಧಿಸುವಂತಹ ಯಾವುದೇ ಆತಂಕ ಉಡುಪಿ ಮಣಿಪಾಲದಲ್ಲಿ ಇಲ್ಲ. ಹಾಗಾಗಿ ನಮ್ಮ ಉಡುಪಿ ಜಿಲ್ಲೆಯಲ್ಲಿ ನೈಟ್ ಕಫ್ರ್ಯೂವನ್ನು ರದ್ದು ಗೊಳಿಸಿ ನಮ್ಮ ಜನತೆಯ ಧಾರ್ಮಿಕ ಭಾವನೆಗೆ ಧಕ್ಕೆ ಯಾಗದಂತೆ ಮುಖ್ಯ ಮಂತ್ರಿಗಳು ಗಮನ ಹರಿಸಬೇಕು ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅನಾವಶ್ಯಕ ನೈಟ್ ಕಫ್ರ್ಯೂ ನಿಂದ ಉಡುಪಿ ಮಣಿಪಾಲವನ್ನು ಹೊರತು ಪಡಿಸುವಂತೆ ಮುಖ್ಯ ಮಂತ್ರಿಗಳಿಗೆ ಮನವಿ ಮಾಡುತ್ತಿದ್ದು ಇದಕ್ಕೆ ಅವರು ಸ್ಪಂದಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
| | |