ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಅಮಾನತು: ಉನ್ನತಮಟ್ಟದ ತನಿಖೆಗೆ ಆಗ್ರಹ
ಉಡುಪಿ(ಉಡುಪಿ ಟೈಮ್ಸ್ ವರದಿ): ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಮಂಜುಳಾ ಅವರ ಅಮಾನತು ವಿಚಾರ ಇದೀಗ ರಾಜ್ಯ ಮಟ್ಟದಲ್ಲಿ ಸುದ್ಧಿಯಾಗುತ್ತಿದೆ. ಇದೀಗ ಈ ಸುದ್ದಿ ರಾಜ್ಯ ಮಟ್ಟಕ್ಕೆ ಹೋಗಿದ್ದು ಚಿಕ್ಕಬಳ್ಳಾಪುರದ ಸಾಮಾಜಿಕ ಕಾರ್ಯಕರ್ತ ಜಿ ವಿ ಮಂಜುನಾಥ ಎನ್ನುವವರು ‘ಉಡುಪಿ ಟೈಮ್ಸ್’ನಲ್ಲಿ ಪ್ರಕಟವಾದ ಸುದ್ದಿಯನ್ನು ಲಗತ್ತಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಸಲುವಾಗಿ ಉನ್ನತ ಮಟ್ಟದ ತನಿಖೆಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಇವರು ಸಲ್ಲಿಸಿದ ಮನವಿಯಲ್ಲಿ ಉಡುಪಿ ಕ್ಷೇತ್ರ ಶಿಕ್ಷಾಣಾಧಿಕಾರಿ ಕೆ.ಮಂಜುಳ ಭ್ರಷ್ಟಚಾರ ಮುಕ್ತ ಕಛೇರಿ ಮಾಡಲು ಹೊರಟ ಕಾರಣಕ್ಕಾಗಿ ಅಮಾನತ್ತಾಗಿರುವುದಾಗಿ ಗಂಭೀರ ಆರೋಪವನ್ನು ಮಾಡಿದ್ದಾರೆ. ಇದು ನಿಜವೇ ಆಗಿದ್ದಲ್ಲಿ ದಕ್ಷ ಅಧಿಕಾರಿಗಳಲ್ಲಿ ಮನೋಸ್ಥೈರ್ಯ ಕುಗ್ಗಿಸುವ ಪ್ರಕರಣ ಇದಾಗಿದೆ ಎಂದರೆ ತಪ್ಪಾಗಲಾರದು. ಹಾಗಾಗಿ ಸತ್ಯಾಸತ್ಯತೆಯನ್ನು ಅರಿಯಲು ಉನ್ನತ ಮಟ್ಟದ ತನಿಖೆ ಆಗಬೇಕಿದೆ. ಆದುದರಿಂದ ಮಾನ್ಯ ಮುಖ್ಯಮಂತ್ರಿಗಳು ಕೂಡಲೇ ಉನ್ನತಮಟ್ಟದ ತನಿಖೆಗೆ ಆದೇಶಿಸಬೇಕಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ತಮ್ಮ ಅಮಾನತಿನ ವಿಚಾರವಾಗಿ ಮಂಜುಳ ಅವರು ‘ಉಡುಪಿ ಟೈಮ್ಸ್’ ಗೆ ನೀಡಿದ ಪ್ರತಿಕ್ರಿಯೆ ಪ್ರಕಟವಾಗುತ್ತಿದ್ದಂತೆ ಅಧಿಕಾರಿಯ ಅಮಾನತಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಅಲ್ಲದೆ ಅಪಾರ ಪ್ರಮಾಣದಲ್ಲಿ ಸಾರ್ವಜನಿಕರು ಮಂಜುಳ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ ಎಲ್ಲರೂ ಮಂಜುಳಾ ಓರ್ವ ದಕ್ಷ ಹಾಗೂ ಪ್ರಮಾಣಿಕ ಅಧಿಕಾರಿಯಾಗಿದ್ದು ಎಲ್ಲರಿಗೂ ಮಾದರಿಯಾಗಿದ್ದರು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅವರ ಈ ಅಮಾನತು ನ್ಯಾಯವಾದದ್ದಲ್ಲ ಎಂಬ ಮಾತುಗಳೂ ಕೇಳಿ ಬಂದಿದೆ. ಇದರೊಂದಿಗೆ ‘ಉಡುಪಿ ಟೈಮ್ಸ್‘ ನಲ್ಲಿ ಪ್ರಕಟವಾದ ಸುದ್ದಿಗೆ 80 ಕ್ಕೂ ಅಧಿಕ ಮಂದಿ ಪ್ರತಿಕ್ರಿಯೆ ನೀಡಿದ್ದು ಎಲ್ಲರೂ ಮಂಜುಳಾ ಅವರನ್ನು ಬೆಂಬಲಿಸುವ ಮೂಲಕ ಸಕಾರಾತ್ಮಕ ಪ್ರತಿಕ್ರಿಯೆ ನೀಡಿರುವುದು ವಿಶೇಷ.