ಕೊರೊನಾ ಕರ್ಫ್ಯೂ: ವಾಣಿಜ್ಯ ಚಟುವಟಿಕೆ, ಪಬ್‌, ಹೋಟೆಲ್‌, ರೆಸ್ಟೋರೆಂಟ್‌ಗಳು ಬಂದ್

ಬೆಂಗಳೂರು: ಕೋವಿಡ್‌ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಕಾರಣ ರಾಜಧಾನಿ ಬೆಂಗಳೂರು ನಗರ ಸೇರಿ ರಾಜ್ಯದ ಏಳು ಜಿಲ್ಲಾ ಕೇಂದ್ರ ಮತ್ತು ಮಣಿಪಾಲದಲ್ಲಿ ಏ.10ರಿಂದ 20ರವರೆಗೆ ‘ಕೊರೊನಾ ಕರ್ಫ್ಯೂ’ (ರಾತ್ರಿ ಕರ್ಫ್ಯೂ) ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಪ್ರಧಾನಿ ನರೇಂದ್ರ ಮೋದಿ ಜೊತೆ ಗುರುವಾರ ಸಂಜೆ ವಿಡಿಯೊ ಸಂವಾದದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ‘ಬೆಂಗಳೂರು ನಗರ, ಮೈಸೂರು, ಮಂಗಳೂರು, ಕಲಬುರ್ಗಿ, ಬೀದರ್, ತುಮಕೂರು, ಉಡುಪಿ ನಗರದ ಜೊತೆಗೆ ಮಣಿಪಾಲದಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗುವುದು’ ಎಂದು ಹೇಳಿದರು.

ಈ ಜಿಲ್ಲೆಗಳ ಕೇಂದ್ರ ಭಾಗದಲ್ಲಿ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಈ ಅವಧಿಯಲ್ಲಿ ಅಗತ್ಯ ಸೇವೆಗಳು ಅಬಾಧಿತವಾಗಿರುತ್ತವೆ. ಆದರೆ, ಜನರ ಅನಗತ್ಯ ಓಡಾಟ ನಿಯಂತ್ರಿಸಲು ವಾಣಿಜ್ಯ ಚಟುವಟಿಕೆಯೂ ಸೇರಿದಂತೆ ಉಳಿದೆಲ್ಲ ಚಟುವಟಿಕೆಗೆ ನಿರ್ಬಂಧ ಹೇರಲಾಗುವುದು. ಪಬ್‌, ಹೋಟೆಲ್‌, ರೆಸ್ಟೋರೆಂಟ್‌ಗಳು ಬಂದ್‌ ಆಗಲಿವೆ.

‘ಪ್ರಧಾನಿ ಸುದೀರ್ಘವಾಗಿ ಚರ್ಚೆ ಮಾಡಿದರು. ಬೆಂಗಳೂರು ಮತ್ತು ಇತರ 6 ಜಿಲ್ಲೆಗಳಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದರೂ, ಮರಣ ಪ್ರಮಾಣ ರಾಜ್ಯದಲ್ಲಿ ಶೇ 0.50 ರಷ್ಟು ಇರುವುದು ಸಮಾಧಾನಕರ ಸಂಗತಿ. ಈ ಕುರಿತು ಕೇಂದ್ರ ಸರ್ಕಾರವೂ ತೃಪ್ತಿ ವ್ಯಕ್ತಪಡಿಸಿದೆ. ಈ ಸಂದರ್ಭದಲ್ಲಿ ಅವರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಅದರಂತೆ, ಕೊರೊನಾ ಕರ್ಫ್ಯೂ ಜಾರಿಗೊಳಿಸಲು ತೀರ್ಮಾನಿಸಿದ್ದೇವೆ’ ಎಂದು ಯಡಿಯೂರಪ್ಪ ಹೇಳಿದರು.

‘ಜ್ಯೋತಿಬಾ ಫುಲೆ ಜನ್ಮ ದಿನವಾದ ಏ.11ರಂದು ಆರಂಭಗೊಂಡು ಅಂಬೇಡ್ಕರ್ ಜಯಂತಿ ದಿನವಾದ ಏ. 14ರ ವರೆಗೆ ಲಸಿಕಾ ಆಂದೋಲನ ಹಮ್ಮಿಕೊಳ್ಳುವಂತೆ ಪ್ರಧಾನಿ ಕರೆ ನೀಡಿದ್ದಾರೆ. ರಾಜ್ಯದಲ್ಲಿಯೂ ಕ್ರಮ ಕೈಗೊಳ್ಳಲಾಗುವುದು. ಮುಂಜಾಗ್ರತೆ ಕ್ರಮವಾಗಿ ಪಿಎಂ-ಕೇರ್ಸ್ ನಿಧಿಯಿಂದ ಆಕ್ಸಿಜನ್ ಜನರೇಟರ್‌ಗಳನ್ನು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ಎಂದು ಯಡಿಯೂರಪ್ಪ ಹೇಳಿದರು.

‘ಮೈಕ್ರೋ ಕಂಟೈನ್‌ಮೆಂಟ್ ವಲಯಗಳಿಗೆ ಆದ್ಯತೆ ನೀಡಬೇಕು. ಆಂಬ್ಯುಲೆನ್ಸ್, ಆಕ್ಸಿಜನ್ ಪೂರೈಕೆ ಹಾಗೂ ವೆಂಟಿಲೇಟರ್ ಸೌಲಭ್ಯಗಳಿಗೆ ಆದ್ಯತೆ ನೀಡುವಂತೆ ಪ್ರಧಾನಿ ಸೂಚಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಜಾತ್ರೆ, ಹಬ್ಬಗಳು ಮತ್ತಿತರ ಧಾರ್ಮಿಕ ಮತ್ತು ಸಾಮಾಜಿಕ ಸಮಾವೇಶಗಳನ್ನು ನಿಷೇಧಿಸಲಾಗಿದೆ. ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನ ಅನುಷ್ಠಾನ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆ ಮಾಡದವರಿಗೆ, ಅಂತರ ಕಾಯ್ದುಕೊಳ್ಳದವರಿಗೆ ದಂಡ ವಿಧಿಸಲಾಗುತ್ತಿದೆ’ ಎಂದೂ ಅವರು ವಿವರಿಸಿದರು.

‘ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ದಿನ ನಡೆಸುವ ಪರೀಕ್ಷೆಗಳ ಪ್ರಮಾಣ ದುಪ್ಪಟ್ಟಾಗಿದ್ದು, 1.20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಆಸ್ಪತ್ರೆಗಳಲ್ಲಿ ಸಾಮಾನ್ಯ ಹಾಸಿಗೆಗಳು, ಆಕ್ಸಿಜನ್ ಸಂಪರ್ಕವಿರುವ ಹಾಸಿಗೆಗಳು ಮತ್ತು ಐಸಿಯುಗಳು ಸಾಕಷ್ಟು ಲಭ್ಯ ಇವೆ. 42 ಸಾವಿರ ಸಾಮಾನ್ಯ ಹಾಸಿಗೆಗಳು, 30 ಸಾವಿರ ಆಕ್ಸಿಜನ್‌ ಸಂಪರ್ಕವಿರುವ ಹಾಸಿಗೆಗಳು ಹಾಗೂ 3 ಸಾವಿರ ಐಸಿಯುಗಳು ಮತ್ತು 2,900 ವೆಂಟಿಲೇಟರ್ ಗಳಿರುವ ಹಾಸಿಗೆಗಳು ಲಭ್ಯ ಇವೆ’ ಎಂದೂ ಅವರು ತಿಳಿಸಿದರು.

‘ರಾತ್ರಿ ಹೊತ್ತು ಅನಗತ್ಯವಾಗಿ ಜನರ ಓಡಾಟ ನಿರ್ಬಂಧಿಸಲು ರಾತ್ರಿ ಕರ್ಫ್ಯೂ ವಿಧಿಸಲಾಗುತ್ತಿದೆ. ಆದರೆ, ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗಳಿಗೆ ಹೋಗುವವರಿಗೆ ಯಾವುದೇ ನಿರ್ಬಂಧ ಇರುವುದಿಲ್ಲ’ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಹೇಳಿದರು.

ಕೋವಿಡ್‌ ತಡೆ: ಅಲಕ್ಷ್ಯಕ್ಕೆ ಮೋದಿ ಅತೃಪ್ತಿ: ಕೆಲವು ರಾಜ್ಯಗಳ ಆಡಳಿತ ವ್ಯವಸ್ಥೆಯು ಕೋವಿಡ್‌–19 ನಿಯಂತ್ರಣದ ವಿಚಾರದಲ್ಲಿ ಅಸಡ್ಡೆ ತೋರಿವೆ ಎಂದು ಪ್ರಧಾನಿ ನರೇಂದ್ರ ಮೋದಿ  ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋವಿಡ್‌ ಹರಡುವಿಕೆ ತಡೆ ಪ್ರಯತ್ನಗಳನ್ನು ಮುಂದಿನ ಎರಡು–ಮೂರು ವಾರ ಸಮರೋಪಾದಿಯಲ್ಲಿ ನಡೆಸಬೇಕು ಎಂದು ಅವರು ಮುಖ್ಯಮಂತ್ರಿಗಳ ಜತೆಗೆ ಗುರುವಾರ ಸಂಜೆ ನಡೆಸಿದ ಸಭೆಯಲ್ಲಿ ಸೂಚಿಸಿದ್ದಾರೆ. 

‘ಈ ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ಕೋವಿಡ್‌ ನಿರ್ವಹಿಸುವ ವಿಚಾರದಲ್ಲಿ ನಮ್ಮಲ್ಲಿ ಹೆಚ್ಚಿನ ಸಂಪನ್ಮೂಲಗಳು ಇವೆ. ಕಂಟೈನ್‌ಮೆಂಟ್‌ ವಲಯಗಳ ನಿರ್ವಹಣೆಗೆ ಹೆಚ್ಚಿನ ಗಮನ ಹರಿಸಬೇಕು’ ಎಂದು ಅವರು ಹೇಳಿದ್ದಾರೆ. ಪರೀಕ್ಷೆ, ಪತ್ತೆ, ಚಿಕಿತ್ಸೆ, ಕೋವಿಡ್‌ ತಡೆಗೆ ಪೂರಕ ವರ್ತನೆ ಮತ್ತು ಲಸಿಕೆ ನೀಡಿಕೆಯ ಐದು ಹಂತಗಳ ಕಾರ್ಯತಂತ್ರದ ಮೂಲಕ ಕೋವಿಡ್‌ ಹರಡುವಿಕೆಗೆ ತಡೆ ಒಡ್ಡಬಹುದು ಎಂದು ಅವರು ಮುಖ್ಯಮಂತ್ರಿಗಳಿಗೆ ತಿಳಿಸಿದರು. 

Leave a Reply

Your email address will not be published. Required fields are marked *

error: Content is protected !!