ಕೋವಿಡ್-19 ಎರಡನೇ ಅಲೆ: ಏ.11 ರಿಂದ 14 ದೇಶಾದ್ಯಂತ ವ್ಯಾಕ್ಸಿನ್ ಉತ್ಸವಕ್ಕೆ ಪ್ರಧಾನಿ ಕರೆ
ನವದೆಹಲಿ: ಏಪ್ರಿಲ್ 11ರಿಂದ 14ರವರೆಗೆ ದೇಶಾದ್ಯಂತ ವ್ಯಾಕ್ಸಿನ್ ಉತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದು, ವ್ಯಾಕ್ಸಿನ್ ಉತ್ಸವ ಮೂಲಕ ಹೆಚ್ಚಿನ ಜನರಿಗೆ ಲಸಿಕೆ ಹಾಕಿಸಬೇಕು, 45ವರ್ಷಕ್ಕೂ ಮೇಲ್ಪಟ್ಟವರಿಗೆ ತ್ವರಿತಗತಿಯಲ್ಲಿ ವ್ಯವಸ್ಥೆ ಮಾಡಬೇಕಾಗಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದ್ದಾರೆ.
ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ವಿಡಿಯೋ ಸಂವಾದ ಸಭೆಯಲ್ಲಿ ಮಾತನಾಡಿದ ಪ್ರಧಾನಿ, ಕೋವಿಡ್-19 ಪರೀಕ್ಷೆಯನ್ನು ಹೆಚ್ಚಿಸಬೇಕಾಗಿದೆ. ಶೇ.70 ರಷ್ಟು ಆರ್ ಟಿ- ಪಿಸಿಆರ್ ಪರೀಕ್ಷೆ ಮಾಡಬೇಕಾಗಿದೆ.ಪರೀಕ್ಷೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಿದಾಗ ಪಾಸಿಟಿವ್ ಕೇಸ್ ಗಳು ಅಧಿಕ ಸಂಖ್ಯೆಯಲ್ಲಿ ಬರುತ್ತವೆ. ಸೂಕ್ತ ಮಾದರಿಗಳ ಸಂಗ್ರಹ ಅತ್ಯಂತ ಪ್ರಮುಖವಾಗಿದೆ. ಸೂಕ್ತ ಆಡಳಿತದ ಮೂಲಕ ಇದನ್ನು ಪರಿಶೀಲಿಸಬೇಕಾಗಿದೆ ಎಂದರು.
ಕೊರೋನಾ ತಡೆಗೆ ಯುದ್ದೋಪಾದಿ ಕಾರ್ಯ ಅತ್ಯಗತ್ಯವಾಗಿದೆ. ಸೋಂಕು ನಿಯಂತ್ರಣಕ್ಕೆ ಜನರ ಸಹಭಾಗಿತ್ವ ಅಗತ್ಯ. ಸೋಂಕು ಪತ್ತೆ, ಪರೀಕ್ಷೆ ಹಾಗೂ ಉಪಚಾರ ಅನೀವಾರ್ಯವಾಗಿದೆ. ದೇಶದಲ್ಲಿ ಮೊದಲನೇ ಅಲೆ ಮುಗಿದಿದ್ದು, ಪಾಸಿಟಿವ್ ದರ ಹೆಚ್ಚಳವಾಗುತ್ತಿದೆ. ಪಾಸಿಟಿವ್ ದರವನ್ನು ಶೇಕಡಾ 5ಕ್ಕಿಂತ ಕಡಿಮೆ ಮಾಡಬೇಕಾಗಿದೆ. ಲಸಿಕೆ ನೀಡಿಕೆ ಅಭಿಯಾನವನ್ನು ಚುರುಕುಗೊಳಿಸಬೇಕಾಗಿದೆ.ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾಗಿದೆ. ಇದಕ್ಕಾಗಿ ಸರ್ವ ಪಕ್ಷ ಸಭೆ ನಡೆಸಿ ಸರ್ಕಾರ ಒಮ್ಮತದ ಅಭಿಪ್ರಾಯಗಳನ್ನು ಸಂಗ್ರಹಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಎಲ್ಲಾ ಸವಾಲುಗಳ ಹೊರತಾಗಿಯು ಉತ್ತಮ ಅನುಭವ, ಸಂಪನ್ಮೂಲ, ಮತ್ತು ಲಸಿಕೆಯನ್ನು ಹೊಂದಿದ್ದು, ಕೋವಿಡ್- ಎರಡನೇ ಅಲೆ ವಿರುದ್ಧ ಯುದ್ದೋಪಾದಿಯಲ್ಲಿ ಹೋರಾಟ ಮಾಡಬೇಕಾಗಿದೆ. ಮಹಾರಾಷ್ಟ್ರ, ಗುಜರಾತ್, ಛತ್ತೀಸ್ ಗಢ, ಪಂಜಾಬ್ ನಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಸೂಕ್ಷ್ಮ – ಕಂಟೈನ್ ಮೆಂಟ್ ವಲಯಗಳತ್ತ ಗಮನ ಹರಿಸಬೇಕಾಗಿದೆ ಎಂದರು.
ಸೋಂಕು ನಿಯಂತ್ರಣಕ್ಕೆ ಲಾಕ್ ಡೌನ್ ಅಗತ್ಯವಿಲ್ಲ. ನೈಟ್ ಕರ್ಪ್ಯೂ ಕಡೆಗೆ ಆದ್ಯತೆ ನೀಡಬೇಕಾಗಿದೆ. ವಿಶ್ವದೆಲ್ಲೆಡೆ ಇದು ಸ್ವೀಕೃತವಾದ ಕ್ರಮವಾಗಿದೆ. ಕೊರೋನಾ ವೈರಸ್ ತಡೆಗೆ ಅರಿವು ಮೂಡಿಸುವ ಸಲುವಾಗಿ ಕೊರೋನಾ ಕರ್ಫ್ಯೂ ಎಂದು ಕರೆಯೋಣ, ರಾತ್ರಿ 9 ಅಥವಾ 10 ಗಂಟೆಯಿಂದ ಬೆಳಗ್ಗೆ 5 ಅಥವಾ 6 ಗಂಟೆಯವರೆಗೂ ಕರ್ಪ್ಯೂ ಜಾರಿಗೊಳಿಸುವುದು ಉತ್ತಮ ಎಂದು ನರೇಂದ್ರ ಮೋದಿ ತಿಳಿಸಿದರು